ಕೋಲ್ಕತಾ: ಈ ಹಿಂದೆ ನಿಗದಿಯಾದಂತೆ ಮಾರ್ಚ್ 24 ಮತ್ತು 25ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಸಲಾಗುವುದು ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ ಬಿಯು) ತಿಳಿಸಿದೆ. ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಭಾರತೀಯ ಬ್ಯಾಂಕ್ ಗಳ ಸಂಘ(ಐಬಿಎ)ದೊಂದಿಗೆ ನಡೆದ ಮಾತುಕತೆಗಳು ಯಾವುದೇ ಸಕಾರಾತ್ಮಕ ಫಲಿತಾಂಶ ನೀಡದ ಕಾರಣ ನಿಗದಿಯಾದಂತೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಯುಎಫ್ ಬಿಯು ಹೇಳಿದೆ.
ಎಲ್ಲಾ ಕೇಡರ್ಗಳಲ್ಲಿ ನೇಮಕಾತಿ ಮತ್ತು ವಾರಕ್ಕೆ ಐದು ದಿನಗಳ ಕೆಲಸ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಐಬಿಎ ಜೊತೆಗಿನ ಸಭೆಯಲ್ಲಿ ಯುಎಫ್ಬಿಯು ನ ಎಲ್ಲ ಘಟಕಗಳು ಪ್ರಸ್ತಾಪಿಸಿವೆ. ಆದಾಗ್ಯೂ ಪ್ರಮುಖ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್ಸಿಬಿಇ) ಪ್ರಧಾನ ಕಾರ್ಯದರ್ಶಿ ಎಲ್ ಚಂದ್ರಶೇಖರ್ ಹೇಳಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸಗಾರರು ಮತ್ತು ಅಧಿಕಾರಿ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ತಮ್ಮ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಒಂಬತ್ತು ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟವಾದ ಯುಎಫ್ಬಿಯು ಈ ಹಿಂದೆ ಮುಷ್ಕರ ನಡೆಸುವುದಾಗಿ ಘೋಷಿಸಿತ್ತು.
ಕಾರ್ಯಕ್ಷಮತೆ ವಿಮರ್ಶೆಗಳು ಮತ್ತು ಕಾರ್ಯಕ್ಷಮತೆ ಸಂಬಂಧಿತ ಪ್ರೋತ್ಸಾಹಕಗಳಿಗೆ ಸಂಬಂಧಿಸಿದಂತೆ ಹಣಕಾಸು ಸೇವೆಗಳ ಇಲಾಖೆಯು (ಡಿಎಫ್ಎಸ್) ಇತ್ತೀಚೆಗೆ ಹೊರಡಿಸಲಾದ ನಿರ್ದೇಶನಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒಕ್ಕೂಟಗಳು ಬೇಡಿಕೆ ಇಟ್ಟಿವೆ. ಇಂಥ ಕ್ರಮಗಳು ಉದ್ಯೋಗ ಭದ್ರತೆಗೆ ಅಪಾಯವನ್ನುಂಟು ಮಾಡುತ್ತವೆ ಎಂದು ಅವು ಆರೋಪಿಸಿವೆ.
ಡಿಎಫ್ಎಸ್ ನಿಂದ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು "ಸೂಕ್ಷ್ಮ ನಿರ್ವಹಣೆ" ಮಾಡುವುದನ್ನು ವಿರೋಧಿಸಿರುವ ಯುಎಫ್ಬಿಯು, ಇಂಥ ಹಸ್ತಕ್ಷೇಪಗಳು ಬ್ಯಾಂಕ್ ಮಂಡಳಿಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತವೆ ಎಂದು ಆರೋಪಿಸಿದೆ.
ಐಬಿಎಯೊಂದಿಗಿನ ಉಳಿದ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಗ್ರಾಚ್ಯುಟಿ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸಲು ಗ್ರಾಚ್ಯುಟಿ ಕಾಯ್ದೆಗೆ ತಿದ್ದುಪಡಿ ಮಾಡುವುದು, ಅದನ್ನು ಸರ್ಕಾರಿ ನೌಕರರ ಯೋಜನೆಯೊಂದಿಗೆ ಹೊಂದಿಸುವುದು ಮತ್ತು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುವುದು ಇತರ ಬೇಡಿಕೆಗಳಲ್ಲಿ ಸೇರಿವೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್ಸಿಬಿಇ) ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ) ಸೇರಿದಂತೆ ಪ್ರಮುಖ ಬ್ಯಾಂಕ್ ಒಕ್ಕೂಟಗಳನ್ನು ಯುಎಫ್ಬಿಯು ಒಳಗೊಂಡಿದೆ.