ರಷ್ಯಾ: ರಷ್ಯಾ-ಉಕ್ರೇನ್ ನಡುವೆ 30 ದಿನಗಳ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾಧ್ಯಕ್ಷ ವಾಡ್ಲಿಮಿರ್ ಪುಟಿನ್ ಒಪ್ಪಿಗೆ ನೀಡಿದ್ದು, ಈ ಸಂಬಂಧ ಮತ್ತಷ್ಟು ಚರ್ಚೆಯಾಗಬೇಕು ಎಂದಿದ್ದಾರೆ.
ಇದರ ಜೊತೆಗೆ ಯುದ್ಧ ಕೊನೆಗೊಳಿಸುವಲ್ಲಿ ಮಾತುಕತೆಗೆ ಮುಂದಾದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಪುಟಿನ್, ಜಾಗತಿಕ ಸವಾಲಿನ ನಡುವೆ ಯುದ್ಧಭೂಮಿಯಲ್ಲಿ ಶಾಂತಿಗಾಗಿ ಕಾರ್ಯನಿರ್ವಹಿಸಿದ ನಾಯಕರ ಪ್ರಯತ್ನಕ್ಕೆ ಧನ್ಯವಾದ ತಿಳಿಸಿದರು.
ಉಕ್ರೇನ್ ಪರಿಸ್ಥಿತಿಯ ಬಗ್ಗೆ ಗಮನಹರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಭಾರತದ ಪ್ರಧಾನಿ ಮೋದಿ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕರೂ ಸೇರಿದಂತೆ ಅನೇಕ ನಾಯಕರು ಈ ಕಾರ್ಯಕ್ಕಾಗಿ ತಮ್ಮ ಸಮಯ ವ್ಯಯಿಸಿದ್ದಾರೆ. ಯುದ್ಧ ನಿಲ್ಲಿಸುವ ಮಹೋನ್ನತ ಕೆಲಸಕ್ಕಾಗಿ ಅವರು ಮಾಡಿದ ಕೊಡುಗೆಯನ್ನು ನಾವು ಶ್ಲಾಘಿಸುತ್ತೇವೆ ಎಂದಿದ್ದಾರೆ.
ಅಮೆರಿಕ 30 ದಿನಗಳ ಕದನ ವಿರಾಮವನ್ನು ಪ್ರಸ್ತಾಪಿಸಿದ್ದು, ಯಾವುದೇ ಷರತ್ತುಗಳಿಲ್ಲದೆ ಒಪ್ಪಂದ ಒಪ್ಪಿಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸಿದೆ. ಇದಕ್ಕೆ ಪುಟಿನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಇದರಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳಿದ್ದು, ಈ ಪ್ರಸ್ತಾಪವನ್ನು ಹೇಗೆ ಜಾರಿ ಮಾಡಲಾಗುತ್ತದೆ ಎಂಬ ಕುರಿತು ಕೆಲವು ಗಂಭೀರ ಪ್ರಶ್ನೆಗಳಿವೆ. ಹೆಚ್ಚಿನ ಚರ್ಚೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.