ಮಧ್ಯಪ್ರದೇಶ: ಜನರು ಸಾಮಾನ್ಯವಾಗಿ ಪ್ಲಾಸ್ಟಿಕ್ ಚೊಂಬು, ಬಕೆಟ್ ಮತ್ತು ಟಬ್‌ಗಳನ್ನು ಬಳಕೆಯ ನಂತರ ಬಿಸಾಕುತ್ತಾರೆ. ಆದರೆ, ಈ ಪ್ಲಾಸ್ಟಿಕ್ ತ್ಯಾಜ್ಯವು ಸಾವಿರಾರು ವರ್ಷಗಳಿಂದ ಮಣ್ಣಿನಲ್ಲಿ ಉಳಿದು ಅದನ್ನು ಮಾಲಿನ್ಯಗೊಳಿಸುತ್ತವೆ. ಆದರೆ, ಈ ಸಮಸ್ಯೆಯಿಂದ ಹೊರ ಬರಲು ಹೊಸ ವಿಧಾನವೊಂದನ್ನು ಕಂಡುಕೊಳ್ಳುವ ಯತ್ನ ನಡೆಸಲಾಗುತ್ತಿದೆ.
ಈ ಒಂದು ನವೀನ ವಿಧಾನವು ಈ ಸಮಸ್ಯೆಯನ್ನು ಪರಿಹರಿಸಬಹುದು. ಭೋಪಾಲ್‌ನ ಮೌಲಾನಾ ಆಜಾದ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- MANIT ರಸಾಯನಶಾಸ್ತ್ರ ವಿಭಾಗದ ಎಚ್‌ಒಡಿ ಸವಿತಾ ದೀಕ್ಷಿತ್ ಅವರು ಇಂತಹ ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನವನ್ನು ತಯಾರಿಸುವ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ.
ದೀಕ್ಷಿತ್ ಅವರು ಪ್ಲಾಸ್ಟಿಕ್‌ನಿಂದ ಡೀಸೆಲ್ ಮತ್ತು ಪೆಟ್ರೋಲ್ ತಯಾರಿಸುವ ಸೂತ್ರವನ್ನು ಕಂಡುಹಿಡಿದಿದ್ದಾರೆ. ಅವರು ತಮ್ಮ ಪತಿ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಗಜೇಂದ್ರ ದೀಕ್ಷಿತ್ ಮತ್ತು ಸಂಶೋಧನಾ ವಿದ್ಯಾರ್ಥಿ ವಿಜೇಶ್ ಶರ್ಮಾ ಅವರೊಂದಿಗೆ ಪೇಟೆಂಟ್ ಕೂಡಾ ಪಡೆದುಕೊಂಡಿದ್ದಾರೆ
ಸವಿತಾ ದೀಕ್ಷಿತ್ ಮಾತನಾಡಿ ದೇಶ ಮತ್ತು ವಿಶ್ವದ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಆದರೆ, ನೈಸರ್ಗಿಕ ಇಂಧನದ ಲಭ್ಯತೆ ಕಡಿಮೆಯಾಗುತ್ತಿದೆ, ನಾವು ನೈಸರ್ಗಿಕ ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಭವಿಷ್ಯದ ಪರ್ಯಾಯಗಳನ್ನು ಪರಿಗಣಿಸಬೇಕು ಮತ್ತು ಮಣ್ಣಿನಲ್ಲಿ ಎಂದಿಗೂ ಹಾಳಾಗದ ಪ್ಲಾಸ್ಟಿಕ್ ಅನ್ನು ಬಳಸಬೇಕಿದೆ ಎಂದು ಅವರು ಹೇಳಿದರು.
ಪ್ಲಾಸ್ಟಿಕ್‌ನಿಂದ ತಯಾರಿಸಿದ ಡೀಸೆಲ್ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸಾಂಪ್ರದಾಯಿಕ ಇಂಧನಕ್ಕಿಂತ ಸುಮಾರು 30 ಪ್ರತಿಶತ ಅಗ್ಗವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಹಳೆಯ ಟಬ್‌ಗಳು, ಬಕೆಟ್‌ಗಳು ಅಥವಾ ಇತರ ಪ್ಲಾಸ್ಟಿಕ್ ತುಂಡುಗಳನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಲಾಗುತ್ತದೆ. ಮತ್ತು ನೈಸರ್ಗಿಕ ಪದಾರ್ಥಗಳೊಂದಿಗೆ ಬೆರೆಸಲಾಗುತ್ತದೆ. ಪರಿಣಾಮವಾಗಿ ಈ ದ್ರವವನ್ನು ನಂತರ 20:80 ಅನುಪಾತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನೊಂದಿಗೆ ಬೆರೆಸಲಾಗುತ್ತದೆ ಎಂದು ದೀಕ್ಷಿತ್ ವಿವರಿಸಿದರು. ತಮ್ಮ ಪ್ರಯೋಗಾಲಯದಲ್ಲಿ ಈ ಪ್ರಕ್ರಿಯೆಯನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆಗಳು ಉತ್ತಮ ಫಲಿತಾಂಶಗಳನ್ನು ತೋರಿಸಿವೆ. NOx ಹೊರಸೂಸುವಿಕೆಯಲ್ಲಿ 20 ಪ್ರತಿಶತದಷ್ಟು ಕಡಿತ ಮತ್ತು ವೆಚ್ಚದಲ್ಲಿ ಇಳಿಕೆಯಾಗಿದೆ ಎಂಬುದನ್ನು ಕಂಡುಕೊಂಡಿದ್ದೇವೆ ಎಂದಿದ್ದಾರೆ.
ಪ್ಲಾಸ್ಟಿಕ್‌ನಿಂದ ಇಂಧನವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅನೇಕ ಉಪ ಉತ್ಪನ್ನಗಳಾಗಿ ಮಾಡಬಹುದು ಎಂದು ಅವರು ಹೇಳಿದ್ದಾರೆ. ಇದನ್ನು ಬಿಸಾಡುವ ಅಗತ್ಯವಿಲ್ಲ, ಪ್ಲಾಸ್ಟಿಕ್‌ನಿಂದ ಇಂಧನವನ್ನು ತಯಾರಿಸಿದ ನಂತರ ಉಳಿದ ತ್ಯಾಜ್ಯವನ್ನು ಮೇಣದಬತ್ತಿಗಳು, ಶೂ ಪಾಲಿಶ್, ಲೂಬ್ರಿಕೇಟಿಂಗ್ ಎಣ್ಣೆ ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲು ಬಳಸಬಹುದು ಎಂದು ದೀಕ್ಷಿತ್ ತಮ್ಮ ಪ್ರಯೋಗದ ಬಗ್ಗೆ ವಿವರಣೆ ನೀಡಿದ್ದಾರೆ.
ಈ ಇಂಧನ ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗುತ್ತದೆ ಎಂದು ಕೇಳಿದಾಗ, ನಾವು ಲ್ಯಾಬ್ ನಲ್ಲಿ ಈ ಬಗ್ಗೆ ಪರೀಕ್ಷೆಗಳು ಮತ್ತು ಸಂಶೋಧನೆಗಳನ್ನು ನಡೆಸುತ್ತಿದ್ದೇವೆ. ಮಾರುಕಟ್ಟೆಗೆ ಸಿದ್ಧಪಡಿಸಲು ನಮ್ಮ ಬಳಿ ಸಾಕಷ್ಟು ಸಮಯವಿಲ್ಲ. ಅದನ್ನು ಮಾರುಕಟ್ಟೆಗೆ ತರಬಲ್ಲವರೊಂದಿಗೆ ನಾವು ನಮ್ಮ ಪರಿಕಲ್ಪನೆಯನ್ನು ಪೇಟೆಂಟ್ ಮಾಡಬಹುದು. ಕಂಪನಿಯು ನಮ್ಮ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡರೆ, ಅವರು ನಮ್ಮನ್ನು ಸಂಪರ್ಕಿಸಬಹುದು ಮತ್ತು ನಾವು ತಂತ್ರಜ್ಞಾನವನ್ನು ಅವರಿಗೆ ವರ್ಗಾಯಿಸುತ್ತೇವೆ ಎಂದು ದೀಕ್ಷಿತ್ ಇದೇ ವೇಳೆ ಹೇಳಿದರು.