ನವದೆಹಲಿ: 1973ರ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಕಾಂಗ್ರೆಸ್ ಆಡಳಿತದ ರಾಜ್ಯಗಳ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ ಬಹಿರಂಗಪಡಿಸಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆ ಕುರಿತು ಬಿರುಗಾಳಿ ಎದ್ದಿರುವ ನಡುವೆ ದುಬೆ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಲೋಕಸಭೆಯಲ್ಲಿ ಮಾತನಾಡಿದ ಜಾರ್ಖಂಡ್ನ ಗೊಡ್ಡಾ ಕ್ಷೇತ್ರದ ಬಿಜೆಪಿ ಸಂಸದ, 1973 ರ ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಎಂದು ಹೇಳಿದರು.
"ಆದರೆ ಆವಾಗ ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜ್ಯಗಳಾದ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಹೆಚ್ಚಾಗಿತ್ತು. ಇಷ್ಟು ಮಾತ್ರವಲ್ಲದೇ ಜನಸಂಖ್ಯೆ ಆಧಾರದ ಮೇಲೆಯೇ ಡಿಲಿಮಿಟೇಶನ್ ಮಾಡಬೇಕು ಎಂದು ಇದೇ ಕಾಂಗ್ರೆಸ್ ಪ್ರತಿಪಾದಿಸಿತ್ತು" ಎಂದು ನಿಶಿಕಾಂತ್ ದುಬೆ ಹೇಳಿದರು.
ಸಂಸದ ದುಬೆ ತಮ್ಮ ತವರು ರಾಜ್ಯದಲ್ಲಿ ಜನಸಂಖ್ಯಾಶಾಸ್ತ್ರ ಬದಲಾಗುತ್ತಿರುವ ವಿಚಾರವನ್ನು ಪ್ರಸ್ತಾಪಿಸಿ, ಹಿಂದಿನ ಕಾಂಗ್ರೆಸ್ ಸರ್ಕಾರಗಳು ಜಾರ್ಖಂಡ್ ಗೆ 'ದ್ರೋಹ' ಮಾಡಿವೆ ಎಂದು ವಾಗ್ದಾಳಿ ನಡೆಸಿದರು. 2008 ರಲ್ಲಿ ರಾಷ್ಟ್ರವ್ಯಾಪಿ ಡಿಲಿಮಿಟೇಶನ್ ಡ್ರೈವ್ ನಲ್ಲಿ ಹೊರಗುಳಿದ ಏಕೈಕ ರಾಜ್ಯ ಜಾರ್ಖಂಡ್ ಎಂದು ಅವರು ಹೇಳಿದರು. ಇದನ್ನು ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
"2008 ರಲ್ಲಿ ಜಾರ್ಖಂಡ್ನಲ್ಲಿ ಡಿಲಿಮಿಟೇಶನ್ ಮಾಡಿದ್ದರೆ, ಸಂತಾಲ್ ಪರಗಣ ಪ್ರದೇಶದ ಬುಡಕಟ್ಟು ಜನಾಂಗದವರು ಒಂದು ಲೋಕಸಭಾ ಸ್ಥಾನ ಮತ್ತು ಮೂರು ವಿಧಾನಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತಿದ್ದರು" ಎಂದು ಅವರು ಹೇಳಿದರು.
ಗೊಡ್ಡಾ, ದಿಯೋಘರ್, ದುಮ್ಕಾ, ಜಮ್ತಾರಾ, ಸಾಹಿಬ್ ಗಂಜ್ ಮತ್ತು ಪಕುರ್ ಎಂಬ ಆರು ಜಿಲ್ಲೆಗಳನ್ನು ಒಳಗೊಂಡಿರುವ ಜಾರ್ಖಂಡ್ ನ ಸಂತಾಲ್ ಪರಗಣದಲ್ಲಿ ಬುಡಕಟ್ಟು ಜನಸಂಖ್ಯೆಯಲ್ಲಿ ತೀವ್ರ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಬಾಂಗ್ಲಾದೇಶದ ನುಸುಳುಕೋರರು ಮತ್ತು ರೋಹಿಂಗ್ಯಾಗಳು ಇದಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಜನಸಂಖ್ಯೆ ಆಧಾರಿತ ಡಿಲಿಮಿಟೇಶನ್ ಸಂಸತ್ತಿನಲ್ಲಿ ತಮಿಳುನಾಡಿನ ಪ್ರಾತಿನಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹೇಳಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಡಿಲಿಮಿಟೇಶನ್ ಮೂಲಕ ಸ್ಥಾನಗಳ ಹಂಚಿಕೆಗೆ 1971 ರ ಜನಗಣತಿಯೇ ಆಧಾರವಾಗಿರಬೇಕು ಎಂದು ಒತ್ತಾಯಿಸಿದರು. ಈಗಿನ ಜನಸಂಖ್ಯಾ ಆಧಾರದಲ್ಲಿ ಡಿಲಿಮಿಟೇಶನ್ ಮಾಡಿದರೆ ದಕ್ಷಿಣ ರಾಜ್ಯಗಳು ಹಲವಾರು ಸ್ಥಾನಗಳನ್ನು ಕಳೆದುಕೊಳ್ಳುವಂತಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.