ತೆಲಂಗಾಣ : ಉಸ್ಮಾನಿಯಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜು ಮುಂದಿನ ಆರು ತಿಂಗಳೊಳಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ 'ಫ್ರಿಕ್ವೇನ್ಸಿ ಸಿಂಥಸೈಜರ್' ಎಂಬ ಹೆಸರಿನ ಮೈಕ್ರೋಚಿಪ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಈ ಮೈಕ್ರೋಚಿಪ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರಶೇಖರ್ ಅವರು ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಸೇರಿ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ 'ಚಿಪ್ಸ್ ಟು ಸ್ಟಾರ್ಟಪ್ ' ಯೋಜನೆಯಡಿ ಐದು ಕೋಟಿ ರೂ. ಅನುದಾನ ನೀಡಿದೆ. ಫ್ರೀಕ್ವೆನ್ಸಿ ಸಿಂಥಸೈಸರ್ ಮೈಕ್ರೋಚಿಪ್ ವಾಹನಗಳು, ಡಿಜಿಟಲ್ ಉಪಕರಣಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳ ಆಂತರಿಕ ದಕ್ಷತೆ ಹೆಚ್ಚಿಸಲಿದೆ.
ಹೈದರಾಬಾದ್‌ನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆಯಾಗಲು ಪ್ರಮುಖ ಹೆಜ್ಜೆಯಾಗಿದೆ. ಈ ಚಿಪ್ ಬ್ಲೂಟೂತ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಮಾರುಕಟ್ಟೆಗೆ ಬಂದ ನಂತರ ವಿವಿಧ ಕೈಗಾರಿಕೆಗಳಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ.
ವಿಜ್ಞಾನಿಗಳು ಇತ್ತೀಚೆಗೆ ಚಂಡೀಗಢದ ಸೆಮಿಕಂಡಕ್ಟರ್ ಲ್ಯಾಬೋರೇಟರಿಯಲ್ಲಿ (SEL) ಚಿಪ್‌ನ ದಕ್ಷತೆ ಮೌಲ್ಯಮಾಪನ ಮಾಡಲು ಪರೀಕ್ಷೆಗಳನ್ನು ನಡೆಸಿದರು. ಮೈಕ್ರೋಚಿಪ್‌ನೊಳಗಿನ ಸರ್ಕ್ಯೂಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪರೀಕ್ಷೆಗಳು ದೃಢಪಡಿಸಿವೆ. ಮುಂದಿನ ಹಂತವು ಉತ್ಪಾದನೆ ಮತ್ತು ಅಧಿಕೃತ ಅನುಮೋದನೆಗೂ ಮೊದಲು ಸಮಯ ವಿಶ್ಲೇಷಣೆ ಮತ್ತು ಧ್ವನಿ ಸಂಕೇತ (ಅಕೌಸ್ಟಿಕ್ ಸಿಗ್ನಲ್) ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
ಉಸ್ಮಾನಿಯಾ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ್ ಮಾತನಾಡಿ, "ವಾಹನಗಳು, ಉಪಕರಣಗಳು ಮತ್ತು ಇತರ ಡಿಜಿಟಲ್ ಸಾಧನಗಳ ಆಂತರಿಕ ದಕ್ಷತೆ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಮೈಕ್ರೋಚಿಪ್ ಬಹುತೇಕ ಪೂರ್ಣಗೊಂಡಿದೆ. ಫ್ರೀಕ್ವೆನ್ಸಿ ಸಿಂಥಸೈಸರ್ ಚಿಪ್ಗಳು ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಲಿವೆ. ಕೇಂದ್ರ ಸರ್ಕಾರದ ಅನುಮೋದನೆಯ ನಂತರ ಮಾರುಕಟ್ಟೆ ಪ್ರವೇಶಿಸಿದ ಬಳಿಕ, ಇದು ಜಾಗತಿಕ ಮಟ್ಟದಲ್ಲಿ ಭಾರತದ ಸೆಮಿಕಂಡಕ್ಟರ್ ಸಾಮರ್ಥ್ಯ ಪ್ರದರ್ಶಿಸುತ್ತದೆ" ಎಂದರು.