ಸೌದಿ ಅರೇಬಿಯಾ : ರಷ್ಯಾ ಜೊತೆಗಿನ 30 ದಿನಗಳ ಕದನ ವಿರಾಮಕ್ಕೆ ಉಕ್ರೇನ್ ಸಮ್ಮತಿಸಿದ ಬೆನ್ನಲ್ಲೇ ಉಕ್ರೇನ್ಗೆ ನೀಡುತ್ತಿದ್ದ ಸೇನಾ ನೆರವಿನ ಮೇಲೆ ವಿಧಿಸಿದ್ದ ತಾತ್ಕಾಲಿಕ ಸ್ಥಗಿತ ಕ್ರಮವನ್ನು ಟ್ರಂಪ್ ಆಡಳಿತ ಹಿಂಪಡೆದಿದೆ. ಸೌದಿ ಅರೇಬಿಯಾದಲ್ಲಿ ಮಂಗಳವಾರ ನಡೆದ ಮಹತ್ವದ ಮಾತುಕತೆಯ ನಂತರ ಈ ಬೆಳವಣಿಗೆ ನಡೆದಿದೆ.
ರಷ್ಯಾದೊಂದಿಗೆ ಯುದ್ಧ ಕೊನೆಗೊಳಿಸುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್ಸ್ಕಿ ಮಾತುಕತೆಗೆ ಮುಂದಾಗದೇ ಇದ್ದುದಕ್ಕೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದವೂ ಏರ್ಪಟ್ಟಿತ್ತು. ಉಕ್ರೇನ್ಗೆ ನೀಡುತ್ತಿದ್ದ ಎಲ್ಲಾ ಸೇನಾ ನೆರವನ್ನು ತಾತ್ಕಾಲಿಕವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಸ್ಥಗಿತಗೊಳಿಸಿದ್ದರು. ಇದೀಗ ಟ್ರಂಪ್ ಕ್ರಮಕ್ಕೆ ಮಣಿದಿರುವ ಝೆಲನ್ಸ್ಕಿ ಕದನ ವಿರಾಮಕ್ಕೆ ಒಪ್ಪಿದ್ದಾರೆ.
ಜೆದ್ದಾದಲ್ಲಿ ನಡೆದ ಮಾತುಕತೆಗೆ ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, "ವಾಷಿಂಗ್ಟನ್ ಕದನ ವಿರಾಮದ ಪ್ರಸ್ತಾಪವನ್ನು ಕ್ರೆಮ್ಲಿನ್‌ಗೆ (ರಷ್ಯಾ) ಸಲ್ಲಿಸಲಿದೆ. ಯುದ್ದ ನಿಲ್ಲಿಸಲು ಉಕ್ರೇನ್ ಸಿದ್ದವಾಗಿದೆ. ರಷ್ಯಾದಿಂದಲೂ ಇದೇ ನಿರೀಕ್ಷೆ ಇದೆ. ಇದಕ್ಕೆ ಇಲ್ಲ ಅಥವಾ ಹೌದು ಎಂದು ಹೇಳುವುದು ರಷ್ಯಾ ಮೇಲೆ ನಿಂತಿದೆ. ಅವರು ಒಂದು ವೇಳೆ ಇಲ್ಲ ಎಂದರೆ, ಶಾಂತಿಗೆ ಇರುವ ಅಡ್ಡಿ ಏನು ಎಂಬುದು ತಿಳಿಯಲಿದೆ ಎಂದರು.
ಸುಮಾರು 8 ಗಂಟೆಗಳ ಕಾಲ ಕದನ ವಿರಾಮದ ಕುರಿತು ಚರ್ಚೆ ನಡೆದಿದೆ. ಇದಾದ ಬಳಿಕ ಮಾತನಾಡಿರುವ ಟ್ರಂಪ್, "ಮುಂದಿನ ಕೆಲವು ದಿನದಲ್ಲಿ ಒಪ್ಪಂದ ಅಂತಿಮಗೊಳ್ಳಲಿದೆ. ಉಕ್ರೇನ್ಗಿಂತ ರಷ್ಯಾದ ಜೊತೆ ವ್ಯವಹರಿಸುವುದು ಸುಲಭ ಎಂದು ನಾನು ತಿಳಿದಿದ್ದೇನೆ. ಆದರೆ, ಉಕ್ರೇನ್ ಪೂರ್ಣ ಕದನ ವಿರಾಮಕ್ಕೆ ಒಪ್ಪಿದರೆ ಒಳ್ಳೆಯದು" ಎಂದು ಹೇಳಿದರು.
ಈ ಬೆನ್ನಲ್ಲೇ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲನ್ಸ್ಕಿ, "ಉಕ್ರೇನ್ ಈ ಯುದ್ಧ ಆರಂಭವಾದಾನಿಗಿಂದಲೂ ಪ್ರತಿಕ್ಷಣ ಶಾಂತಿಗಾಗಿ ಶ್ರಮಿಸುತ್ತಿದೆ. ನಾವು ಸುರಕ್ಷತೆಯನ್ನು ಬಯಸುತ್ತಿದ್ದೇವೆ" ಎಂದಿದ್ದಾರೆ.