ರಾಜಸ್ಥಾನ : ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿರುವ 13 ವರ್ಷದ ಬಾಲಕಿಯ 26 ವಾರಗಳ ಭ್ರೂಣ ತೆಗೆಸಲು ರಾಜಸ್ಥಾನ ಹೈಕೋರ್ಟ್ ಅನುಮತಿ ನೀಡಿದೆ. ಈ ಗರ್ಭವು ಆಕೆಯನ್ನು ಜೀವನಪೂರ್ತಿ ಸಂಕಷ್ಟಕ್ಕೆ ತಳ್ಳುತ್ತದೆ. ಜೊತೆಗೆ, ಮಗುವಿನ ನಿರ್ವಹಣೆ ಹೊರೆ ಸೇರಿ ಮತ್ತಿತರ ಅಂಶಗಳು ಆಕೆಗೆ ಸವಾಲಾಗುತ್ತದೆ. ಹೀಗಾಗಿ, ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ನ್ಯಾ.ಸುದೇಶ್ ಬನ್ಸಲ್ ಅವರಿದ್ದ ಪೀಠ ಈ ಆದೇಶ ನೀಡಿತು. ಬಾಲಕಿ ಗರ್ಭವನ್ನು ಮುಂದುವರೆಸಿದಲ್ಲಿ ಅದು ಆಕೆಯ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅತ್ಯಾಚಾರ ಸಂತ್ರಸ್ತೆಯ ಪರ ವಾದ ಮಂಡಿಸಿದ ಸೋನಿಯಾ ಶಾಂಡಿಲ್ಯಾ ಮಾತನಾಡಿ, "ಜೈಪುರದಲ್ಲಿನ ಸಂಗನೆರ್ನ ಮಹಿಳಾ ಆಸ್ಪತ್ರೆಯ ಸೂಪರಿಂಟೆಂಡೆಂಟ್ಗೆ ವೈದ್ಯಕೀಯ ಮಂಡಳಿ ಮೇಲ್ವಿಚಾರಣೆ ಮೇಲೆ ಗರ್ಭಪಾತ ನಡೆಸುವಂತೆ ಸೂಚಿಸಲಾಗಿದೆ" ಎಂದು ತಿಳಿಸಿದ್ದಾರೆ.
ಗರ್ಭಪಾತದ ವೇಳೆ ಭ್ರೂಣ ಜೀವಂತವಾಗಿದ್ದು, ಅದರ ಉಳಿವಿಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು. ಅದರ ಭವಿಷ್ಯವನ್ನು ರಾಜ್ಯ ಸರ್ಕಾರದ ನಿಧಿ ಮೂಲಕ ಆರೈಕೆ ಮಾಡಬೇಕು. ಒಂದು ವೇಳೆ ಭ್ರೂಣ ಬದುಕಲಿಲ್ಲವಾದರೆ ಅದರ ಅಂಗಾಂಶವನ್ನು ಡಿಎನ್ಎ ವಿಶ್ಲೇಷಣೆಗೆ ಸಂರಕ್ಷಿಸಬೇಕು ಎಂದು ಪೀಠ ಹೇಳಿದೆ.
ವಿಚಾರಣೆ ವೇಳೆ, 28 ವಾರಗಳ ನಂತರ ಗರ್ಭಪಾತಕ್ಕೆ ಕೂಡ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ ಎಂಬುದನ್ನು ವಕೀಲರ ತಂಡ ಉಲ್ಲೇಖಿಸಿತು. ವೈದ್ಯಕೀಯ ಗರ್ಭಪಾತ ಕಾಯ್ದೆ-1971ರ ಪ್ರಕಾರ, ಅತ್ಯಾಚಾರ ಸಂತ್ರಸ್ತೆ ಗರ್ಭ ಧರಿಸಿದ್ದಲ್ಲಿ, ಅದು ಸಂತ್ರಸ್ತೆಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಅಪಾಯ ಉಂಟುಮಾಡುತ್ತದೆ ಎಂಬುದನ್ನು ಕಾನೂನಾತ್ಮಕವಾಗಿ ಪರಿಗಣಿಸಲಾಗಿದೆ.
24 ವರ್ಷಗಳ ಒಳಗಿನ ಗರ್ಭಪಾತಕ್ಕೆ ಕಾನೂನಿನ ಯಾವುದೇ ಅನುಮತಿ ಬೇಕಿಲ್ಲ. ಆದರೆ, ಅದಕ್ಕಿಂತ ಹೆಚ್ಚಿನ ವಾರಗಳು ಆದಾಗ ಎಂಟಿಪಿಎಲ್ಕಾಯ್ದೆ-1971 ಪ್ರಕಾರ, ಕಾನೂನಾತ್ಮಕ ಒಪ್ಪಿಗೆ ಅಗತ್ಯ.