ಮಾಸ್ಕೊ : ಮಾಸ್ಕೋ ಮತ್ತು ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಾತ್ರೋರಾತ್ರಿ ಉಕ್ರೇನ್ ನಡೆಸಿದ ಬೃಹತ್ ಪ್ರಮಾಣದ ಡ್ರೋನ್ ದಾಳಿಯಲ್ಲಿ ಕನಿಷ್ಠ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯ ಹೊರವಲಯದಲ್ಲಿರುವ ವಿಡ್ನೋಯ್ ಮತ್ತು ಡೊಮೊಡೆಡೊವೊ ಪಟ್ಟಣಗಳಲ್ಲಿ ಸಾವು-ನೋವು ಸಂಭವಿಸಿವೆ ಹಾಗೂ ಏಳು ವಸತಿ ಅಪಾರ್ಟ್ಮೆಂಟ್ಗಳಿಗೆ ಹಾನಿಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ಆಂಡ್ರೆ ವೊರೊಬ್ಯೆವ್ ಹೇಳಿದ್ದಾರೆ.
ಮಾಸ್ಕೊ ಮೇಲೆ ಹಾರಿ ಬರುತ್ತಿದ್ದ 73 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಹೇಳಿದ್ದಾರೆ. ಇದು ಫೆಬ್ರವರಿ 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಉಕ್ರೇನ್ ಕಡೆಯಿಂದ ನಡೆಸಲಾದ ಅತಿದೊಡ್ಡ ದಾಳಿಗಳಲ್ಲಿ ಒಂದಾಗಿದೆ.
ವ್ಯಾಪಕ ಡ್ರೋನ್ ದಾಳಿಯ ನಂತರ ಒಂದು ಜಿಲ್ಲೆಯಲ್ಲಿನ ರೈಲು ಸಂಚಾರ ಜಾಲವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಮಾಸ್ಕೋದ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರಕ್ಕೆ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಸೌದಿ ಅರೇಬಿಯಾದಲ್ಲಿ ಯುಎಸ್ ಮತ್ತು ಉಕ್ರೇನ್ ಪ್ರತಿನಿಧಿಗಳ ನಡುವೆ ಶಾಂತಿ ಮಾತುಕತೆ ನಡೆಯುವ ಕೆಲವೇ ಗಂಟೆಗಳ ಮುನ್ನ ಈ ದಾಳಿ ನಡೆದಿರುವುದು ಗಮನಾರ್ಹ.
ಡ್ರೋನ್ ದಾಳಿಯಿಂದಾಗ ಹಾನಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಗವರ್ನರ್ ವೊರೊಬಿಯೆವ್, ಹಾನಿಗೊಳಗಾದ ಒಂದು ಅಪಾರ್ಟ್ಮೆಂಟ್ ಹಾಗೂ ಸುಟ್ಟುಹೋಗಿರುವ ಕಾರುಗಳ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ರಾತ್ರೋರಾತ್ರಿ ನಡೆದ ದಾಳಿಯ ನಂತರ ಹಾನಿಗೊಳಗಾದ ವಸತಿ ಕಟ್ಟಡಗಳಿಂದ ಮೂವರು ಮಕ್ಕಳು ಸೇರಿದಂತೆ 12 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರತಿವರ್ಷ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಮಾಸ್ಕೋದ ಶೆರೆಮೆಟ್ಯೆವೊ, ಡೊಮೊಡೆಡೊವೊ ಮತ್ತು ವ್ನುಕೊವೊ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಮಾಸ್ಕೋ ಮತ್ತು ರಷ್ಯಾದ ಇತರ ಒಂಬತ್ತು ಪ್ರದೇಶಗಳಲ್ಲಿ ಒಟ್ಟಾರೆ 337 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ನಂತರ ವರದಿ ಮಾಡಿದೆ. ಆದಾಗ್ಯೂ ಉಕ್ರೇನ್ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.