image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿನ ಜನದಟ್ಟಣೆ ತಗ್ಗಿಸಲು ತಿರುವಾಂಕೂರು ದೇವಸ್ವಂ ಮಂಡಳಿ ಹೊಸ ದರ್ಶನ ವ್ಯವಸ್ಥೆ

ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿನ ಜನದಟ್ಟಣೆ ತಗ್ಗಿಸಲು ತಿರುವಾಂಕೂರು ದೇವಸ್ವಂ ಮಂಡಳಿ ಹೊಸ ದರ್ಶನ ವ್ಯವಸ್ಥೆ

ಕೇರಳ : ಶಬರಿಮಲೆಯಲ್ಲಿ ವಿರಾಜಮಾನವಾಗಿರುವ ಅಯ್ಯಪ್ಪನನ್ನು ಇನ್ನು ಮುಂದೆ ಭಕ್ತರು ಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ದೇವಸ್ವಂ ಮಂಡಳಿಯು ಭಕ್ತರ ದರ್ಶನಕ್ಕೆ ಹೊಸ ವ್ಯವಸ್ಥೆ ರೂಪಿಸಿದೆ. ಇದರಿಂದ ದಟ್ಟಣೆಯ ಸಮಯದಲ್ಲೂ ಆರಾಮವಾಗಿ ಸ್ವಾಮಿಯ ದರ್ಶನ ಪಡೆಯಲು ಸಾಧ್ಯವಾಗಲಿದೆ.

ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಭಕ್ತರು ಮೂರು ಮಾರ್ಗಗಳಲ್ಲಿ 18 ಮೆಟ್ಟಿಲುಗಳ ಬಳಿ ಬರುತ್ತಿದ್ದರು. ಬಳಿಕ ಅದನ್ನೇರಿ ಸ್ವಾಮಿಯ ದರ್ಶನ ಪಡೆದು ಒಂದೇ ಸಾಲಿನಲ್ಲಿ ಇಲ್ಲಿರು ಫ್ಲೈಓವರ್​ನಲ್ಲಿ ತೆರಳುತ್ತಿದ್ದರು. ಇದರಿಂದ ಸ್ವಾಮಿಯನ್ನು ಮನಸಾರೆ ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಭಕ್ತರು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ದರ್ಶನ ವ್ಯವಸ್ಥೆಯನ್ನು ಬದಲಿಸಲಾಗಿದೆ ಎಂದರು.

ಹೊಸ ವ್ಯವಸ್ಥೆಯಡಿ ದರ್ಶನಕ್ಕೆ ಅವಕಾಶ: ಮಾರ್ಚ್ 14 ರಂದು ಮೀನಮಾಸ ಪೂಜೆಗಾಗಿ ದೇವಾಲಯ ತೆರೆದಾಗ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ಈ ಹೊಸ ವ್ಯವಸ್ಥೆಯು ಯಾತ್ರಿಕರಿಗೆ ದರ್ಶನಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತದೆ. ಸದ್ಯ, ಭಕ್ತರಿಗೆ ಅಯ್ಯಪ್ಪನ ದರ್ಶನ ಪಡೆಯಲು ಕೇವಲ ನಾಲ್ಕರಿಂದ ಐದು ಸೆಕೆಂಡುಗಳು ಮಾತ್ರ ಸಿಗುತ್ತದೆ. ಆದರೆ, ಹೊಸ ವ್ಯವಸ್ಥೆಯಲ್ಲಿ ಸ್ವಾಮಿಯನ್ನು 20 ರಿಂದ 25 ಸೆಕೆಂಡುಗಳಷ್ಟು ಸಮಯ ಕಾಣಬಹುದು ಎಂದು ತಿಳಿಸಿದರು.

ಹೊಸ ವ್ಯವಸ್ಥೆಯಡಿ, 18 ಮೆಟ್ಟಿಲುಗಳನ್ನು ಹತ್ತಿ ಬರುವ ಭಕ್ತರನ್ನು ಇಲ್ಲಿರುವ ಎರಡು ಧ್ವಜಸ್ತಂಭದಲ್ಲಿ ವಿಂಗಡಿಸಲಾಗುತ್ತದೆ. ಎಡದಿಂದ ಪ್ರವೇಶಿಸುವವರು ಸ್ವಲ್ಪ ಎತ್ತರದ ವೇದಿಕೆಯಲ್ಲಿರುತ್ತಾರೆ. ಅಲ್ಲಿ ಅವರು ಸ್ವಾಮಿಯ ದರ್ಶನ ಪಡೆದು ಬಲಕ್ಕೆ ತಿರುಗಲಿದ್ದಾರೆ. ಬಲಭಾಗದಿಂದ ಬರುವ ಯಾತ್ರಿಕರು ನೆಲದ ಮಟ್ಟದಲ್ಲಿರುತ್ತಾರೆ. ದರ್ಶನದ ಬಳಿಕ ಎಡಕ್ಕೆ ತಿರುಗಿ ಮುಂದೆ ಸಾಗಲಿದ್ದಾರೆ. ಇದರಿಂದ ಎರಡೂ ಕಡೆಯಿಂದ ಬರುವವರ ಮಧ್ಯೆ ತಿಕ್ಕಾಟ ತಪ್ಪಲಿದೆ ಎಂದರು.

ಹೊಸ ವ್ಯವಸ್ಥೆಯು ದೇವಾಲಯದ ತಾಂತ್ರಿಕ ರಚನೆಯನ್ನು ಬದಲಿಸುವುದಿಲ್ಲ. ದೇವಸ್ಥಾನದ ತಂತ್ರಿಯಿಂದ ಅನುಮೋದನೆ ಪಡೆಯಲಾಗಿದೆ. ಪ್ರಸ್ತುತ, ಭಕ್ತರು ದೇವಾಲಯದ ಮುಂದೆ ಮೂರು ಸಾಲುಗಳಲ್ಲಿ ಆಗಮಿಸಿ, ಒಂದೇ ಹಾದಿಯಲ್ಲಿ 18 ಮೆಟ್ಟಿಲು ಏರುತ್ತಾರೆ. ಇದು ಜನದಟ್ಟಣೆ ಉಂಟು ಮಾಡುತ್ತದೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮಂಡಳಿಯು ಹೊಸ ವ್ಯವಸ್ಥೆ ರೂಪಿಸಿದೆ ಎಂದು ತಿಳಿಸಿದರು.

ಈ ಬದಲಾವಣೆಗೆ ದೇವಸ್ವಂ ಮಂಡಳಿಯು ಹೈಕೋರ್ಟ್‌ನಿಂದ ಅನುಮತಿಯನ್ನು ಪಡೆದುಕೊಂಡಿದೆ. ಮಂಡಲಪೂಜೆಯ ವೇಳೆ ಭಕ್ತರು ಮತ್ತು ಪೊಲೀಸರ ನಡುವಿನ ಘರ್ಷಣೆಯ ಬಗ್ಗೆ ದೇವಸ್ವಂ ಮಂಡಳಿ ಕಳವಳ ಹೊಂದಿತ್ತು. ಹೊಸ ವ್ಯವಸ್ಥೆಯು ಇದನ್ನು ತಡೆಗಟ್ಟಲಿದೆ. ದೇವಾಲಯದ ಮುಂದೆ ಭಕ್ತರ ಸುಗಮ ದರ್ಶನಕ್ಕೆ ಅವಕಾಶವಾಗಲಿದೆ ಎಂದು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ