ವನವಾಟು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಇತ್ತೀಚಿಗಷ್ಟೇ ವನವಾಟು ದೇಶದ ಪೌರತ್ವವನ್ನು ಪಡೆದಿದ್ದಾರೆ ಎಂಬ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಇದೀಗ ಅವರಿಗೆ ವಿಘ್ನ ಎದುರಾಗಿದೆ. ಲಲಿತ್ ಮೋದಿಗೆ ನೀಡಿರುವ ಪಾಸ್‌ಪೋರ್ಟ್ ಅರ್ಜಿಯನ್ನು ರದ್ದು ಮಾಡುವಂತೆ ವನವಾಟು ಪ್ರಧಾನಿ ಜೊಥಮ್ ನಪಟ್ ಅವರು ದೇಶದ ಪೌರತ್ವ ಆಯುಕ್ತರಿಗೆ ಆದೇಶಿಸಿದ್ದಾರೆ.
ಭಾರತಕ್ಕೆ ಹಸ್ತಾಂತರವಾಗುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಲಲಿತ್ ಮೋದಿ ವನವಾಟುಗೆ ತೆರಳಿದ್ದಾರೆ ಎಂಬ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಅವರ ಪಾಸ್‌ಪೋರ್ಟ್ ಮನವಿಯನ್ನು ರದ್ದುಗೊಳಿಸಲು ವನವಾಟು ಪ್ರಧಾನಿ ನಿರ್ಧರಿಸಿದ್ದಾರೆ. ಈ ಕುರಿತು ಪ್ರಧಾನಿ ಕಚೇರಿಯಿಂದ ಹೊರಬಿದ್ದಿರುವ ಹೇಳಿಕೆ ಪ್ರಕಾರ, ಮೋದಿಗೆ ಎಚ್ಚರಿಕೆ ನೋಟಿಸ್ ಹೊರಡಿಸಬೇಕೆಂಬ ಮನವಿಯನ್ನು ಇಂಟರ್ಪೋಲ್ ಎರಡು ಬಾರಿ ತಿರಸ್ಕರಿಸಿದೆ. ಅಲ್ಲದೇ, ಅವರ ಹಿನ್ನಲೆ ಪರಿಶೀಲಿಸಿದಾಗಲೂ ಯಾವುದೇ ಅಪರಾಧ ಶಿಕ್ಷೆ ಕಂಡುಬಂದಿಲ್ಲ ಎಂದಿದ್ದು, ಅವರ ಅರ್ಜಿಯನ್ನು ರದ್ದು ಮಾಡುವಂತೆ ಸೂಚಿಸಿದ್ದಾರೆ.
ಬಿಸಿಸಿಐನ ಉಪ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಲಲಿತ್ ಮೋದಿ, ಮನಿ ಲಾಂಡರಿಂಗ್, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ-1999ರ ಪ್ರಕಾರ ಆರೋಪಿಯಾಗಿದ್ದಾರೆ. ಆರ್ಥಿಕ ಅವ್ಯವಹಾರ ಮತ್ತು ಅನಧಿಕೃತ ಹಣ ವರ್ಗಾವಣೆ ಸೇರಿದಂತೆ ವಿವಿಧ ಆರೋಪಗಳ ತನಿಖೆಯ ಬೆನ್ನಲ್ಲೇ 2010ರಲ್ಲಿ ಲಲಿತ್ ಮೋದಿ ಭಾರತ ತೊರೆದಿದ್ದರು.
ಮಾರ್ಚ್ 7ರಂದು ಲಲಿತ್ ಮೋದಿ ವನವಾಟು ಪೌರತ್ವ ಪಡೆದಿದ್ದಾರೆ ಎಂಬ ವರದಿಗಳ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ಅನ್ನು ಅವರು ಮರಳಿಸಿರುವುದು ತಿಳಿದು ಬಂದಿದೆ. ಕಾನೂನಿನ ಪ್ರಕಾರ ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಮುಂದುವರಿಸುತ್ತಿದ್ದೇವೆ ಎಂದಿದ್ದರು.