ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಹಿಂದೂ ದೇವಾಲಯದ ಮೇಲೆ ನಡೆದ ದಾಳಿಗೆ ಭಾರತ ಸರ್ಕಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, ದಾಳಿಯು ಹೇಯ ಕೃತ್ಯವಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಬಗ್ಗೆ ಅವರು ವಿದೇಶಾಂಗ ಸಚಿವಾಲಯದ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್ನಲ್ಲಿರುವ ಹಿಂದೂ ದೇವಾಲಯದ ಮೇಲೆ ವಿಧ್ವಂಸಕ ದಾಳಿ ನಡೆದಿರುವುದು ನಮಗೆ ತಿಳಿದು ಬಂದಿದೆ. ಇಂಥ ಹೇಯ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ದೇವಸ್ಥಾನಗಳಿಗೆ ಸಂಪೂರ್ಣ ಭದ್ರತೆ ನೀಡುವಂತೆ ನಾವು ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ" ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿದೇಶಾಂಗ ಸಚಿವಾಲಯವು ಪೋಸ್ಟ್ ಮಾಡಿದೆ.
ಮುಂದಿನ ಕೆಲ ದಿನಗಳಲ್ಲಿ ಲಾಸ್ ಏಂಜಲೀಸ್ನಲ್ಲಿ 'ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹ' ಹೆಸರಿನ ಜನಾಭಿಪ್ರಾಯ ಸಂಗ್ರಹ ನಡೆಯಲಿದೆ. ಅದಕ್ಕೂ ಮುನ್ನ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್ನಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯದ ಗೋಡೆಯ ಮೇಲೆ ವಿಧ್ವಂಸಕಕಾರಿ ಬರಹಗಳನ್ನು ಬರೆಯಲಾಗಿದೆ.
ಚಿನೋ ಹಿಲ್ಸ್ನಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯದ ಮೇಲೆ ನಡೆದ ದಾಳಿಯ ವಿವರಗಳನ್ನು ಯುನೈಟೆಡ್ ಸ್ಟೇಟ್ಸ್ನ ಬಿಎಪಿಎಸ್ ಎಕ್ಸ್ನಲ್ಲಿ ಶೇರ್ ಮಾಡಿದೆ.
"ಚಿನೋ ಹಿಲ್ಸ್ನಲ್ಲಿ ಮಂದಿರವನ್ನು ಅಪವಿತ್ರಗೊಳಿಸುವ ಮತ್ತೊಂದು ಘಟನೆ ನಡೆದಿರುವ ಈ ಸಮಯದಲ್ಲಿ, ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಂತಿದೆ. ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ನಮ್ಮ ಸಮುದಾಯದವರು ಎಂದಿಗೂ ದ್ವೇಷವನ್ನು ಬೇರೂರಲು ಬಿಡುವುದಿಲ್ಲ. ನಮ್ಮ ಸಾಮಾನ್ಯ ಮಾನವೀಯತೆ, ನಂಬಿಕೆ ಶಾಂತಿ ಮತ್ತು ಸಹಾನುಭೂತಿ ಮೇಲುಗೈ ಸಾಧಿಸಲಿವೆ" ಎಂದು ಬಿಎಪಿಎಸ್ ಪಬ್ಲಿಕ್ ಅಫೇರ್ಸ್ ಎಕ್ಸ್ಪ್ರೆಸ್ ಸಂಸ್ಥೆಯು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ (ಸಿಒಎಚ್ಎನ್ಎ) ಕೂಡ ಘಟನೆಯನ್ನು ಖಂಡಿಸಿದ್ದು, ಲಾಸ್ ಏಂಜಲೀಸ್ನಲ್ಲಿ ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹದ ಹೆಸರಿನಲ್ಲಿ ಜನಾಭಿಪ್ರಾಯ ಸಂಗ್ರಹ ನಡೆಯುವ ಮುನ್ನ ಈ ಘಟನೆ ನಡೆದಿದೆ ಎಂದು ಹೇಳಿದೆ.
"ಈಗ ಮತ್ತೊಮ್ಮೆ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಲಾಗಿದೆ. ಈ ಬಾರಿ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್ನಲ್ಲಿರುವ ಅಪ್ರತಿಮ ಬಿಎಪಿಎಸ್ ದೇವಾಲಯದ ಮೇಲೆ ದಾಳಿ ನಡೆದಿದೆ.