image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಿಂಗಳಿಗೆ 2,500 ರೂ.ಗಳ ಆರ್ಥಿಕ ನೆರವು ನೀಡುವ 'ಮಹಿಳಾ ಸಮೃದ್ಧಿ' ಯೋಜನೆ ಶೀಘ್ರವೇ ಪ್ರಾರಂಭ : ದೆಹಲಿ ಸಿ ಎಮ್

ತಿಂಗಳಿಗೆ 2,500 ರೂ.ಗಳ ಆರ್ಥಿಕ ನೆರವು ನೀಡುವ 'ಮಹಿಳಾ ಸಮೃದ್ಧಿ' ಯೋಜನೆ ಶೀಘ್ರವೇ ಪ್ರಾರಂಭ : ದೆಹಲಿ ಸಿ ಎಮ್

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದೆಹಲಿಯ ಮಹಿಳೆಯರಿಗೆ ಮುಖ್ಯಮಂತ್ರಿ ರೇಖಾ ಗುಪ್ತಾ ಗುಡ್​​ನ್ಯೂಸ್​ ಕೊಟ್ಟಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಡ ಮಹಿಳೆಯರಿಗೆ ತಿಂಗಳಿಗೆ 2,500 ರೂ.ಗಳ ಆರ್ಥಿಕ ನೆರವು ನೀಡುವ 'ಮಹಿಳಾ ಸಮೃದ್ಧಿ' ಯೋಜನೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಬಜೆಟ್‌ನಲ್ಲಿ 5,100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ" ಎಂದು ಘೋಷಿಸಿದರು.

"ಮಹಿಳಾ ಸಮೃದ್ಧಿ ಯೋಜನೆಯ ಅನುಷ್ಠಾನಕ್ಕಾಗಿ ನನ್ನ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಹಿರಿಯ ಸಚಿವರಾದ ಆಶಿಶ್ ಸೂದ್, ಪರ್ವೇಶ್ ವರ್ಮಾ ಮತ್ತು ಕಪಿಲ್ ಮಿಶ್ರಾ ಕೂಡ ಈ ಸಮಿತಿಯ ಭಾಗವಾಗಿದ್ದಾರೆ. ಇದಕ್ಕಾಗಿ ನೋಂದಣಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ವೆಬ್​​ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗುವುದು" ಎಂದು ಮಾಹಿತಿ ನೀಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ. ನಡ್ಡಾ ದೆಹಲಿಯ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದರು. "ಮಹಿಳಾ ಸಬಲೀಕರಣ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ. ಮಹಿಳಾ ಸಮೃದ್ಧಿ ಯೋಜನೆಯೊಂದಿಗೆ ದೆಹಲಿಯಲ್ಲಿ ಮಹಿಳಾ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಬೆಂಬಲವಿಲ್ಲದಿದ್ದರೆ ಗೆಲುವು ಸಾಧ್ಯವಾಗುತ್ತಿರಲಿಲ್ಲ" ಎಂದು ನಡ್ಡಾ ಹೇಳಿದರು. ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ, ಬಡ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ.ಗಳನ್ನು ನೀಡುವುದಾಗಿ ಘೋಷಿಸಿತ್ತು. ಇದರೊಂದಿಗೆ ಬಿಜೆಪಿ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 48 ರಲ್ಲಿ ಗೆಲ್ಲುವ ಮೂಲಕ 26 ವರ್ಷಗಳ ಬಳಿಕ ದೆಹಲಿ ಗದ್ದುಗೆ ಏರಿತ್ತು. ಮತ್ತೊಂದೆಡೆ, ಮೂರು ಅವಧಿಗೆ ಅಧಿಕಾರದಲ್ಲಿದ್ದ ಎಎಪಿ 22 ಸ್ಥಾನ ಪಡೆಯಲಷ್ಟೇ ಶಕ್ತವಾಯಿತು. ಕಾಂಗ್ರೆಸ್ ಖಾತೆ ತೆರೆಯಲೂ ಸಾಧ್ಯವಾಗದೇ ಹೀನಾಯ ಸೋಲು ಕಂಡಿತು.

Category
ಕರಾವಳಿ ತರಂಗಿಣಿ