image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಣಿಪುರದಲ್ಲಿ ಎಲ್ಲರಿಗೂ ಮುಕ್ತವಾಗಿ ಸಂಚರಿಸಲು ಅವಕಾಶ : ಮತ್ತೆ ಬುಗಿಲೆದ್ಧ ಹಿಂಸಾಚಾರ

ಮಣಿಪುರದಲ್ಲಿ ಎಲ್ಲರಿಗೂ ಮುಕ್ತವಾಗಿ ಸಂಚರಿಸಲು ಅವಕಾಶ : ಮತ್ತೆ ಬುಗಿಲೆದ್ಧ ಹಿಂಸಾಚಾರ

ಅಸ್ಸಾಂ : ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಮಣಿಪುರದಲ್ಲಿ ಇಂದಿನಿಂದ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ, ಹೊಸ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್ಪೋಕ್ಪಿ ಎಂಬಲ್ಲಿ ಕಿಡಿಗೇಡಿಗಳು ಬಸ್​​ಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಕಿಡಿಗೇಡಿಗಳ ಮೇಲೆ ಲಾಠಿ ಚಾರ್ಜ್​ ನಡೆಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವಾರ ಸಭೆ ನಡೆಸಿ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಇಂದಿನಿಂದ ಹಲವೆಡೆ ಬಸ್​ ಸಂಚಾರ ಆರಂಭಿಸಲಾಯಿತು. ಆದರೆ, ಕಿಡಿಗೇಡಿಗಳು ಮತ್ತೆ ಹಿಂಸಾಚಾರ ಆರಂಭಿಸಿದ್ದಾರೆ.

ರಸ್ತೆಗಳಿಗೆ ಕಲ್ಲು, ದಿಮ್ಮಿ ಹಾಕಿ ತಡೆ: ಕಾಂಗ್ಪೋಕ್ಪಿಯಲ್ಲಿ ಕೆಲವು ಜನರು ದಿಮ್ಮಿ ಮತ್ತು ಕಲ್ಲುಗಳನ್ನು ರಸ್ತೆ ಮೇಲಿಟ್ಟು ಬಸ್​ ಸಂಚಾರಕ್ಕೆ ತಡೆ ಒಡಿದ್ದಾರೆ. ಅಲ್ಲದೇ, ಬಸ್‌ಗೆ ಬೆಂಕಿ ಹಚ್ಚಿದ ವರದಿಗಳೂ ಇವೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಲಾಠಿ ಚಾರ್ಜ್ ನಡೆಸಿದ್ದರಿಂದ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಸ್​​ಗಳಿಗೆ ಬೆಂಕಿ ಹಚ್ಚಿ, ದಿಮ್ಮಿ- ದೊಡ್ಡ ಕಲ್ಲುಗಳಿಂದ ರಸ್ತೆ ನಡೆಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಮಣಿಪುರದ ಮುಖ್ಯ ಕಾರ್ಯದರ್ಶಿ ಶುಕ್ರವಾರ (ಮಾರ್ಚ್​ 7) ಹೊರಡಿಸಿದ ಹೇಳಿಕೆಯಲ್ಲಿ, ರಾಜ್ಯದಲ್ಲಿ ಬಸ್ ಸೇವೆಗಳು ಶನಿವಾರದಿಂದ (ಮಾರ್ಚ್ 8) ಪುನರಾರಂಭಗೊಳ್ಳಲಿವೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಬಸ್ ಸೇವೆಗಳಿಗೆ ಭದ್ರತೆ ಒದಗಿಸಲಿವೆ ಎಂದು ತಿಳಿಸಿದ್ದರು.

ಅದರಂತೆ, ಇಂಫಾಲ್-ಕಾಂಗ್ಪೋಕ್ಪಿ-ಸೇನಾಪತಿ, ಸೇನಾಪತಿ-ಕಾಂಗ್ಪೋಕ್ಪಿ-ಇಂಫಾಲ್, ಇಂಫಾಲ್-ಬಿಷ್ಣುಪುರ್-ಚುರಾಚಂದ್ಪುರ್ ಮತ್ತು ಚುರಾಚಂದ್ಪುರ್-ಬಿಷ್ಣುಪುರ್-ಇಂಫಾಲ್ ಮಾರ್ಗಗಳಲ್ಲಿ ಬಸ್​​​ಗಳು ಸಂಚಾರ ಆರಂಭಿಸಿವೆ. ಈ ಪ್ರದೇಶವು, ಮೈಥೇಯಿ, ಕುಕಿ ಮತ್ತು ನಾಗಾ ಸಮುದಾಯಗಳು ವಾಸಿಸುವ ಪ್ರದೇಶಗಳಾಗಿವೆ. ಸಂಘರ್ಷದಿಂದಾಗಿ ಸ್ಥಗಿತಗೊಂಡಿರುವ ಹೆಲಿಕಾಪ್ಟರ್ ಸೇವೆಯನ್ನೂ ಪುನರಾರಂಭಿಸುವುದಾಗಿ ಆಡಳಿತ ಘೋಷಿಸಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 1 ರಂದು ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ರಾಜ್ಯ ರಸ್ತೆಗಳಲ್ಲಿ ಎಲ್ಲರಿಗೂ ಮುಕ್ತ ಸಂಚಾರಕ್ಕೆ ಅವಕಾಶ ನೀಡಲು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದರು. ಇದಕ್ಕಾಗಿ ಮಾರ್ಚ್ 8 ರ ಗಡುವು ನೀಡಿದ್ದರು. ಇದಕ್ಕೆ ಅನುಗುಣವಾಗಿ ರಾಜ್ಯ ಆಡಳಿತವು ಮಣಿಪುರದಲ್ಲಿ ಸಂಚಾರ ಪ್ರಾರಂಭಿಸಿದೆ.

ಆದರೆ, ಕುಕಿ ಸಮುದಾಯದ ಜನರು ಇರುವ ಪ್ರದೇಶಗಳಿಗೆ ಸ್ವಾಯತ್ತ ಆಡಳಿತ ಅಥವಾ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಬೇಡಿಕೆ ಮಂಡಿಸಲಾಗಿದೆ. ಇದು ಪೂರೈಸುವವರೆಗೆ ಮುಕ್ತ ಸಂಚಾರ ಆರಂಭಿಸುವಂತಿಲ್ಲ ಎಂದು ಕುಕಿ ಸಂಘಟನೆಗಳು ವಿರೋಧಿಸುತ್ತಿವೆ. ರಾಜ್ಯದಲ್ಲಿ ಕಳೆದ 22 ತಿಂಗಳಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು, 200 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿತ್ತು.

Category
ಕರಾವಳಿ ತರಂಗಿಣಿ