ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ರಾಜಕೀಯ ಸಂಘಟನೆಯಾದ ಎಸ್ಡಿಪಿಐ ವಿರುದ್ಧದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದೇಶಾದ್ಯಂತ ಹನ್ನೆರಡು ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರನ್ನು ಇಡಿ ಬಂಧಿಸಿದ ನಂತರ ಈ ದಾಳಿಗಳು ನಡೆದಿವೆ.
ಎಸ್ ಡಿಪಿಐ ಕೇಂದ್ರ ಕಚೇರಿ, ಕೇರಳದ ತಿರುವನಂತಪುರಂ ಮತ್ತು ಮಲಪ್ಪುರಂ, ಆಂಧ್ರಪ್ರದೇಶದ ನಂದ್ಯಾಲ್, ಜಾರ್ಖಂಡ್ ನ ಪಕುರ್, ಮಹಾರಾಷ್ಟ್ರದ ಥಾಣೆ, ಬೆಂಗಳೂರು, ಚೆನ್ನೈ, ಕೋಲ್ಕತಾ, ಲಕ್ನೋ ಮತ್ತು ಜೈಪುರ ಸೇರಿದಂತೆ ದೆಹಲಿಯ ಎರಡು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎರಡೂ ಸಂಘಟನೆಗಳ ನಡುವೆ ಸಂಬಂಧವಿದೆ ಮತ್ತು ಪಿಎಫ್ಐ ತನ್ನ ಅಪರಾಧ ಚಟುವಟಿಕೆಗಳನ್ನು ರಾಜಕೀಯ ಪಕ್ಷ (ಎಸ್ಡಿಪಿಐ)ದ ಮೂಲಕ ನಡೆಸುತ್ತಿದೆ ಎಂದು ಇಡಿ ಈ ಮುನ್ನ ಹೇಳಿತ್ತು.
ಪಿಎಫ್ಐ ಅನ್ನು ಕಾನೂನುಬಾಹಿರ ಸಂಘಟನೆ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕೇಂದ್ರ ಸರ್ಕಾರವು 2022 ರ ಸೆಪ್ಟೆಂಬರ್ ನಲ್ಲಿ ನಿಷೇಧಿಸಿತ್ತು. ಎಸ್ಡಿಪಿಐ 2009ರಲ್ಲಿ ಸ್ಥಾಪನೆಯಾಗಿದ್ದು, ದೆಹಲಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದು ಪಿಎಫ್ಐನ ರಾಜಕೀಯ ರಂಗ ಎಂದು ಆರೋಪಿಸಲಾಗಿದೆ. ಇದು ಭಾರತದ ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟಿದೆ.