ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಲ್ಲಿ ಗೃಹ ವ್ಯವಹಾರಗಳ ಸಲಹೆಗಾರರಾಗಿರುವ ಜಹಾಂಗೀರ್ ಆಲಂ ಚೌಧರಿ ಅವರು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ಖಂಡಿಸಿ ದೇಶಾದ್ಯಂತ ದೊಡ್ಡ ಪ್ರಮಾಣದ ಪ್ರತಿಭಟನೆಗಳು ಭುಗಿಲೆದ್ದಿವೆ.
ಢಾಕಾದ ಲಾಲ್ಮಾಟಿಯಾದಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡಿದ ಇಬ್ಬರು ಯುವತಿಯರಿಗೆ ಕಿರುಕುಳ ನೀಡಿದ ಘಟನೆಯ ಬಗ್ಗೆ ಚೌಧರಿ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. 'ಅತ್ಯಾಚಾರ ಮತ್ತು ದಬ್ಬಾಳಿಕೆಯ ವಿರುದ್ಧ ಬಾಂಗ್ಲಾದೇಶ' ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರ ಗುಂಪು ಮಂಗಳವಾರ ಚೌಧರಿ ಅವರ ಪ್ರತಿಕೃತಿಯನ್ನು ದಹಿಸಿತು.
ಘಟನಾ ಸ್ಥಳದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಂಸತ್ತಿನ ಕಟ್ಟಡದ ಕಡೆಗೆ ಜಾಥಾ ನಡೆಸಿ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದಿಂದ ಚೌಧರಿ ಅವರನ್ನು ತಕ್ಷಣ ವಜಾ ಮಾಡುವಂತೆ ಒತ್ತಾಯಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
"ನನಗೆ ತಿಳಿದು ಬಂದಿರುವಂತೆ ಇಬ್ಬರು ಯುವತಿಯರು ಧೂಮಪಾನ ಮಾಡುತ್ತಿದ್ದರು. ಪ್ರಾರ್ಥನೆಗೆ ಹೋಗುತ್ತಿದ್ದ ಕೆಲವರು ಇದನ್ನು ಆಕ್ಷೇಪಿಸಿದರು. ಆಗ ಯುವತಿಯರು ಅವರ ಮೇಲೆ ಚಹಾ ಎಸೆದರು ಎಂದು ಆರೋಪಿಸಲಾಗಿದೆ." ಎಂದು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಾಂಗೀರ್ ಆಲಂ ಚೌಧರಿ ಹೇಳಿದ್ದರು.
ವಾಸ್ತವದಲ್ಲಿ ನಡೆದಿದ್ದು ಬೇರೆಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ರಸ್ತೆ ಬದಿಯ ಟೀ ಅಂಗಡಿಯಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಇಬ್ಬರು ಯುವತಿಯರಿಗೆ ಪುರುಷರ ಗುಂಪೊಂದು ದೈಹಿಕವಾಗಿ ಕಿರುಕುಳ ನೀಡಿದೆ. ಅಲ್ಲದೇ ಯುವತಿಯರನ್ನು ಜನಸಮೂಹವು ಸುತ್ತುವರೆದು ದೌರ್ಜನ್ಯವೆಸಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಧೂಮಪಾನ ಮಾಡಿದ ಯುವತಿಯರಿಗೆ 10 ರಿಂದ 12 ಪುರುಷರು ಕಪಾಳಮೋಕ್ಷ ಮಾಡಿದ ಮತ್ತು ಥಳಿಸಿದ ವೀಡಿಯೊಗಳು ಸದ್ಯ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿವೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಸಲಹೆಗಾರರು ವಿಫಲ ಆರೋಪ; ಬಾಂಗ್ಲಾದೇಶದಾದ್ಯಂತ ಅತ್ಯಾಚಾರ, ಕೊಲೆ, ಗುಂಪು ಹಿಂಸಾಚಾರ ಮತ್ತು ನೈತಿಕ ಪೊಲೀಸ್ಗಿರಿ ಪ್ರಕರಣಗಳು ಹೆಚ್ಚುತ್ತಿದ್ದರೂ ಗೃಹ ಸಲಹೆಗಾರರು ಇವನ್ನು ನಿಯಂತ್ರಿಸುವಲ್ಲಿ ಅಸಮರ್ಥರಾಗಿದ್ದಾರೆ. ಪದೇ ಪದೆ ಮನವಿ ಮಾಡಿದರೂ ದೇಶದಲ್ಲಿ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ ಎಂದು ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ದಿ ಡೈಲಿ ಸ್ಟಾರ್ ವರದಿ ಮಾಡಿದೆ.
"ಪೊಲೀಸರು ನಮ್ಮ ಮೇಲೆ ದಾಳಿ ಮಾಡಿದ್ದರಿಂದ ನಮ್ಮ ಕೆಲವು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಗೃಹ ಸಲಹೆಗಾರರಿಗೆ ರಾಜೀನಾಮೆ ನೀಡಲು ಮತ್ತು ಕ್ಷಮೆಯಾಚಿಸಲು 24 ಗಂಟೆಗಳ ಗಡುವು ನೀಡಿದ್ದೆವು. ಆದರೆ ಹಾಗೆ ಮಾಡಲು ಅವರು ವಿಫಲರಾಗಿದ್ದಾರೆ. ಈಗ ಸರ್ಕಾರವೇ ಅವರನ್ನು ವಜಾ ಮಾಡಬೇಕು" ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.