ಚೆನ್ನೈ: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಅಲಂಗುಡಿ ಬಳಿಯ ಕೋವಿಲೂರಿನ ಮುತ್ತುಮಾರಿಯಮ್ಮನ್ ದೇವಾಲಯದ ಮಾಸಿತ್ ಉತ್ಸವದ ಜಲ್ಲಿಕಟ್ಟು ಉತ್ಸವ ಮಂಗಳವಾರ ಆರಂಭಗೊಂಡಿದೆ. ಹಿಂದುಳಿದ ವರ್ಗಗಳ ಮತ್ತು ಕಲ್ಯಾಣ ಸಚಿವ ಶಿವ ವಿ ಮೇಯ್ಯನಾಥನ್ ಜಲ್ಲಿಕಟ್ಟು ಉತ್ಸವಕ್ಕೆ ಚಾಲನೆ ನೀಡಿದರು. ಜಲ್ಲಿಕಟ್ಟು ಪ್ರತಿಜ್ಞೆ ಓದುವ ಮತ್ತು ಧ್ವಜ ಹಾರಿಸುವ ಮೂಲಕ ಸಚಿವರು ಅಧಿಕೃತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವರ್ಷದ ಸ್ಪರ್ಧೆಯಲ್ಲಿ 700 ಗೂಳಿಗಳು ಮತ್ತು 300 ಬುಲ್ ಹ್ಯಾಂಡ್ಲರ್ ಗಳು ಭಾಗವಹಿಸಿಸುತ್ತಿದ್ದಾರೆ. ಪುದುಕೊಟ್ಟೈ ತಮಿಳುನಾಡಿನಲ್ಲಿಯೇ ಅತಿ ಹೆಚ್ಚು ವಾಡಿವಾಸಲ್ ಗಳನ್ನು (ಜಲ್ಲಿಕಟ್ಟುನಲ್ಲಿ ಗೂಳಿಗಳಿಗೆ ಪ್ರವೇಶ ದ್ವಾರಗಳು) ಹೊಂದಿರುವ ಜಿಲ್ಲೆಯಾಗಿದ್ದು, ವಡಮಡು ಮತ್ತು ಮಂಜುವಿರಾಟ್ಟುಗಳಂತಹ ಹಲವಾರು ಸಾಂಪ್ರದಾಯಿಕ ಗೂಳಿ ಪಳಗಿಸುವ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
ಜಿಲ್ಲೆಯಲ್ಲಿ ಪ್ರತಿವರ್ಷ ತಚಂಕುರಿಚಿಯಲ್ಲಿ ವರ್ಷದ ಮೊದಲ ಜಲ್ಲಿಕಟ್ಟು ಕಾರ್ಯಕ್ರಮ ನಡೆಯುತ್ತದೆ. ಅದರಂತೆ ಜನವರಿ 4ರಂದು ಈ ವರ್ಷದ ಉದ್ಘಾಟನಾ ಕಾರ್ಯಕ್ರಮ ಜರುಗಿತ್ತು.
ಅಂದಿನಿಂದ ಈ ಪ್ರದೇಶದಾದ್ಯಂತ ಹಲವಾರು ಜಲ್ಲಿಕಟ್ಟು ಸ್ಪರ್ಧೆಗಳು ನಡೆದಿವೆ. ಇಂದಿನ ಜಲ್ಲಿಕಟ್ಟು ಕೋವಿಲೂರಿನ ಮುತ್ತುಮಾರಿಯಮ್ಮನ್ ದೇವಾಲಯದ ಮಾಸಿತ್ ಉತ್ಸವದ ಭಾಗವಾಗಿ ನಡೆಯುತ್ತಿದ್ದು, ಮಧುರೈ, ಶಿವಗಂಗಾ, ತಂಜಾವೂರು, ತಿರುವರೂರು, ಥೇಣಿ ಮತ್ತು ರಾಮನಾಥಪುರಂ ಪ್ರದೇಶಗಳ ಎತ್ತುಗಳು ಇದರಲ್ಲಿ ಭಾಗಿಯಾಗುತ್ತಿವೆ.
ಎತ್ತುಗಳನ್ನು ವಾಡಿವಾಸಲ್ನಿಂದ ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತದೆ. ನಂತರ ಸ್ಪರ್ಧಿಗಳು ಎತ್ತುಗಳೊಂದಿಗೆ ಹೋರಾಡಿ ಅವುಗಳನ್ನು ಪಳಗಿಸಲು ಪ್ರಯತ್ನಿಸುತ್ತಾರೆ. ಉತ್ಸವ ನೋಡಲು ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಜನ ಆಗಮಿಸುತ್ತಾರೆ.
ಅಸಾಧಾರಣ ಪ್ರದರ್ಶನ ನೀಡುವ ಗೂಳಿಗಳು ಮತ್ತು ಹೋರಿಗಳನ್ನು ಯಶಸ್ವಿಯಾಗಿ ಅಪ್ಪಿಕೊಳ್ಳುವ ಗೂಳಿ ಕಾಳಗದವರಿಗೆ ಬೈಸಿಕಲ್, ಹಾಸಿಗೆಗಳು, ಡೆಸ್ಕ್ ಗಳು, ಊಟದ ಟೇಬಲ್, ಬೆಳ್ಳಿ ಪಾತ್ರೆ, ಮಿಕ್ಸರ್, ಕುಕ್ಕರ್, ಗ್ರೈಂಡರ್, ಗ್ಯಾಸ್ ಒಲೆಗಳು, ಬೆಳ್ಳಿ ನಾಣ್ಯಗಳು ಸೇರಿದಂತೆ ನಗದು ಬಹುಮಾನಗಳನ್ನು ಕೂಡ ನೀಡಲಾಗುತ್ತದೆ.