ಟರ್ಕಿ: ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಮಿಲಿಶಿಯಾ ಸಂಘಟನೆಯು ಶನಿವಾರ (ಸ್ಥಳೀಯ ಸಮಯ)ದಿಂದ ಜಾರಿಗೆ ಬರುವಂತೆ ತಕ್ಷಣದ ಕದನ ವಿರಾಮ ಘೋಷಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಂಘಟನೆಯನ್ನು ವಿಸರ್ಜಿಸುವಂತೆ ಜೈಲಿನಲ್ಲಿರುವ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ)ಯ ನಾಯಕ ಅಬ್ದುಲ್ಲಾ ಒಕಲಾನ್ ಅವರು ಹೋರಾಟಗಾರರಿಗೆ ಕರೆ ನೀಡಿದ ಎರಡು ದಿನಗಳ ನಂತರ ಈ ಕದನ ವಿರಾಮ ಘೋಷಣೆಯಾಗಿದೆ.
ಒಂದೊಮ್ಮೆ ಟರ್ಕಿ ಈ ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಕನಿಷ್ಠ 40 ಸಾವಿರ ಜನರ ಸಾವಿಗೆ ಕಾರಣವಾದ ಮತ್ತು ನೆರೆಯ ದೇಶಗಳಲ್ಲೂ ಪರಿಣಾಮ ಬೀರಿದ್ದ ದಶಕಗಳ ಕಾಲ ನಡೆದ ಸಂಘರ್ಷ ಅಂತ್ಯವಾಗಲಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
"ನಾಯಕ ಒಕಲಾನ್ ಅವರ ಕದನ ವಿರಾಮದ ಕರೆಯನ್ನು ನಾವು ಸಂಪೂರ್ಣವಾಗಿ ಒಪ್ಪಿದ್ದೇವೆ, ಇದಕ್ಕಾಗಿ ಎಲ್ಲಾ ಪ್ರಯತ್ನ ಮಾಡುತ್ತೇವೆ ಮತ್ತು ನಮ್ಮ ಕಡೆಯಿಂದ ಇದನ್ನು ಕಾರ್ಯಗತಗೊಳಿಸುತ್ತೇವೆ. ಅದರಂತೆ ಇಂದಿನಿಂದ ಜಾರಿಗೆ ಬರುವಂತೆ ಕದನ ವಿರಾಮವನ್ನು ಘೋಷಿಸುತ್ತಿದ್ದೇವೆ" ಎಂದು ಪಿಕೆಕೆ ಕಾರ್ಯಕಾರಿ ಸಮಿತಿಯು ಪ್ರಕಟಿಸಿರುವುದಾಗಿ ಫಿರಾತ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಪಿಕೆಕೆ ಮತ್ತು ಟರ್ಕಿ ನಡುವಿನ ಸಂಘರ್ಷವು ಟರ್ಕಿ ಮತ್ತು ನೆರೆಹೊರೆಯ ದೇಶಗಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿದೆ. ಹೀಗಾಗಿ ಗುರುವಾರದ ಒಕಲಾನ್ ಅವರ ಕದನ ವಿರಾಮದ ಕರೆಯು ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲಾಗಬಹುದು ಮತ್ತು ಮಧ್ಯಪ್ರಾಚ್ಯದಲ್ಲಿ ದೂರಗಾಮಿ ಪರಿಣಾಮಗಳಿಗೆ ಕಾರಣವಾಗಬಹುದು.