ಉತ್ತರಾಖಂಡ : ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾದಲ್ಲಿ ಶುಕ್ರವಾರ ಉಂಟಾದ ಹಿಮಪಾತದಲ್ಲಿ ರಕ್ಷಣೆಯಾದವರ ಸಂಖ್ಯೆ 50 ಕ್ಕೆ ಏರಿದೆ. ಶನಿವಾರದ ಕಾರ್ಯಾಚರಣೆಯಲ್ಲಿ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ಐವರು ಕಾರ್ಮಿಕರು ನಾಪತ್ತೆಯಾಗಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಶುಕ್ರವಾರ ಬೆಳಗ್ಗೆ 5:30 ರಿಂದ ಬೆಳಗ್ಗೆ 6 ಗಂಟೆಯ ನಡುವೆ ಮಾನಾ ಮತ್ತು ಬದರಿನಾಥ್ ನಡುವಿನ ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಶಿಬಿರದ ಮೇಲೆ ಹಿಮಪಾತವಾಗಿತ್ತು. 8 ಕಂಟೇನರ್‌ಗಳು ಮತ್ತು ಒಂದು ಶೆಡ್‌ನಲ್ಲಿದ್ದ 55 ಕಾರ್ಮಿಕರು ಹಿಮದೊಳಗೆ ಸಿಲುಕಿದ್ದರು. ಅವರಲ್ಲಿ 33 ಮಂದಿಯನ್ನು ಶುಕ್ರವಾರದ ಕಾರ್ಯಾಚರಣೆಯಲ್ಲಿ ರಕ್ಷಿಸಲಾಯಿತು. ಮಳೆ ಮತ್ತು ಹಿಮಪಾತವು ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗಿತ್ತು.
ಶನಿವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಮರು ಆರಂಭವಾದ ಬಳಿಕ ಸಂಜೆ ವೇಳೆಗೆ 17 ಮಂದಿಯನ್ನು ರಕ್ಷಿಸಲಾಯಿತು. ಇದೇ ವೇಳೆ ನಾಲ್ವರು ಶವವಾಗಿ ಸಿಕ್ಕಿದ್ದಾರೆ. ಇನ್ನೂ ಐವರು ಪತ್ತೆಯಾಗಿಲ್ಲ. ಕತ್ತಲೆ ಆವರಿಸಿದ ಕಾರಣ, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ.
"ಇಂದು ನಡೆದ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯ 6 ಹೆಲಿಕಾಪ್ಟರ್‌ಗಳನ್ನು ಬಳಸಲಾಯಿತು. ಐವತ್ತು ಕಾರ್ಮಿಕರನ್ನು ರಕ್ಷಿಸಲಾಗಿದೆ. ದುರದೃಷ್ಟವಶಾತ್, ನಾಲ್ವರು ತೀವ್ರ ಗಾಯಗೊಂಡು ಅಸುನೀಗಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಇಂದು ರಕ್ಷಿಸಲಾದ ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಋಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ" ಎಂದು ಸೇನಾ ವಕ್ತಾರರು ತಿಳಿಸಿದರು.