ರಷ್ಯಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಶ್ವೇತಭವನದಲ್ಲಿ ಉಕ್ರೇನಿಯನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ರಷ್ಯಾದ ರಾಜ್ಯ ಮಾಧ್ಯಮ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಅವರ ಮಿತ್ರರಾಷ್ಟ್ರ ವಿಜಯೋತ್ಸವವನ್ನು ಆಚರಿಸಿದೆ.
ರಷ್ಯಾ - ಉಕ್ರೇನ್ ಯುದ್ಧದಲ್ಲಿ ಕದನ ವಿರಾಮ ಮಾತುಕತೆ ನಡೆಸಲು ಟ್ರಂಪ್ ಪ್ರಯತ್ನಗಳನ್ನು ನಡೆಸುತ್ತಿದ್ದು, ಈ ಮಧ್ಯೆ ನಿನ್ನೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆ ನಡೆಸಲು ಶ್ವೇತಭವನಕ್ಕೆ ಭೇಟಿ ನೀಡಿದರು. ಈ ವೇಳೆ ನಡೆದ ಸಭೆಯಲ್ಲಿ ಝೆಲೆನ್ಸ್ಕಿ ಆಡಿದ ಮಾತೊಂದಕ್ಕೆ ಟ್ರಂಪ್, ಝೆಲೆನ್ಸ್ಕಿ ಅವರೇ ನೀವು ಸಭೆಗೆ "ಅಗೌರವ‘‘ ತೋರುತ್ತಿದ್ದೀರಿ , "ಭವಿಷ್ಯದಲ್ಲಿ ನಾವು ಏನು ಭಾವಿಸಬೇಕೆಂದು ಹೇಳಲು ನಿಮಗೆ ಯಾವುದೇ ಹಕ್ಕಿಲ್ಲ. ನೀವು(ಉಕ್ರೇನ್) ಮೂರನೇ ಮಹಾಯುದ್ಧದೊಂದಿಗೆ ಜೂಜಾಡುತ್ತಿದ್ದೀರಿ" ಎಂದು ಕೋಪದಲ್ಲೇ ಎಚ್ಚರಿಸಿದರು.
ಮುಂದುವರಿದ ಮಾತುಕತೆಯಲ್ಲಿ, ಟ್ರಂಪ್ "ನಾನು ನಿಮಗೆ (ಝೆಲೆನ್ಸ್ಕಿ) ಧೈರ್ಯಶಾಲಿ ವ್ಯಕ್ತಿಯಾಗಲು ಅಧಿಕಾರ ನೀಡಿದ್ದೇನೆ. ನೀನು ಒಪ್ಪಂದ ಮಾಡಿಕೊಳ್ಳಬೇಕು ಇಲ್ಲದಿದ್ದರೆ ನಾವು ಹೊರಗೆ ಹೋಗುತ್ತೇವೆ. ನಿಮ್ಮ ಕೈಯಲ್ಲಿ ಏನೂ ಇಲ್ಲ" ಎಂದು ಟೀಕಿಸಿದರು.
ರಷ್ಯಾದ ಭದ್ರತಾ ಮಂಡಳಿಯ ಉಪ ಮುಖ್ಯಸ್ಥ ಮತ್ತು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಟೆಲಿಗ್ರಾಮ್‌ನಲ್ಲಿ ಈ ಸಂವಾದಕ್ಕೆ ಪ್ರತಿಕ್ರಿಯಿಸಿ, "ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಬಲವಾದ ಹೊಡೆತ ನೀಡಿದ್ದಾರೆ. 'ಕೀವ್(ಉಕ್ರೇನ್) ಆಡಳಿತವು ಮೂರನೇ ಮಹಾಯುದ್ಧದೊಂದಿಗೆ ಜೂಜಾಡುತ್ತಿದೆ' ಎಂದು ಟ್ರಂಪ್ ಹೇಳಿರುವುದು ಸರಿಯಾಗಿದೆ' ಎಂದು ಸಮರ್ಥಿಸಿಕೊಂಡಿದ್ದಾರೆ.