ನವದೆಹಲಿ: ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 7.46 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಜಾಗತಿಕ ಷೇರುಗಳಲ್ಲಿನ ಕುಸಿತದ ಪ್ರವೃತ್ತಿಯ ನಂತರ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 1,000 ಅಂಕಗಳ ಕುಸಿತದೊಂದಿಗೆ ಹೂಡಿಕೆದಾರರಿಗೆ ಭಾರಿ ನಷ್ಟವನ್ನುಂಟು ಮಾಡಿದೆ. ನಿಫ್ಟಿ ಸಹ 300 ಪಾಯಿಂಟ್ಗಳಷ್ಟು ಕುಸಿದಿದೆ.
ಕಳೆದ ಕೆಲ ದಿನಗಳಿಂದ ಮಾರುಕಟ್ಟೆ ಚೇತರಿಕೆಯನ್ನೇ ಕಂಡಿಲ್ಲ. ಜಾಗತಿಕ ವ್ಯಾಪಾರ ಯುದ್ಧದ ಭೀತಿಯಿಂದ ಮಾರುಕಟ್ಟೆಗಳು ಮಕಾಡೆ ಮಲಗಿವೆ. ತಾಜಾ ಸುಂಕದ ಬೆದರಿಕೆಗಳು ಮತ್ತು ವಿದೇಶಿ ಹೂಡಿಕೆ ದಾರರು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ತೊಡಗಿರುವುದರಿಂದ ಈ ಕುಸಿತ ಕಂಡು ಬಂದಿದೆ.
30 ಪ್ರಮುಖ ಷೇರುಗಳ BSE ಬೆಂಚ್‌ಮಾರ್ಕ್ ಬೆಳಗಿನ ವಹಿವಾಟಿನ ಸಮಯದಲ್ಲಿ 1,032.99 ಪಾಯಿಂಟ್‌ಗಳು ಅಥವಾ 1.38 ಶೇಕಡಾ 73,579.44 ಕ್ಕೆ ಕುಸಿತ ದಾಖಲಿಸಿತು.
ಷೇರುಗಳಲ್ಲಿನ ತೀವ್ರ ಕುಸಿತದ ನಂತರ, ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳವು ಬೆಳಗಿನ ವಹಿವಾಟಿನಲ್ಲಿ 7,46,647.62 ಕೋಟಿ ರೂ.ದಿಂದ 3,85,63,562.91 ಕೋಟಿಗೆ (USD 4.42 ಟ್ರಿಲಿಯನ್) ಕುಸಿತ ಕಂಡಿತು.
ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಮಾರುತಿ, ಎಚ್‌ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಟೈಟಾನ್ ಅತಿ ಹೆಚ್ಚು ನಷ್ಟ ಅನುಭವಿಸಿದವು.
ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಪೋರ್ಟ್ಸ್ ಷೇರುಗಳು ಹಸಿರು ಮಾರ್ಕ್ ನಲ್ಲಿ ವ್ಯವಹಾರ ನಡೆಸಿದವು.
ಏಷ್ಯಾದ ಮಾರುಕಟ್ಟೆಗಳಾದ ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಆಳವಾದ ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ.
ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್ ಅವರ ಪ್ರಕಾರ, ಷೇರು ಮಾರುಕಟ್ಟೆಗಳು ಯಾವಾಗಲೂ ಅನಿಶ್ಚಿತತೆ ಇಷ್ಟಪಡುವುದಿಲ್ಲ. ಅದರಲ್ಲೂ ಟ್ರಂಪ್ ಅವರು ಅಮೆರಿಕಾ ಅಧ್ಯಕ್ಷರಾದ ಬಳಿಕ ಹೆಚ್ಚು ಅನಿಶ್ಚಿತತೆ ಕಂಡು ಬರುತ್ತಿದೆ