ವಾಷಿಂಗ್ಟನ್: ಕಳೆದ ವಾರ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಡಿಕ್ಟೇಟರ್ ಎಂದು ಕರೆದಿದ್ದರು. ಈ ಸಂಬಂಧ ಮಾಧ್ಯಮದವರು ಅಮೆರಿಕ ಅಧ್ಯಕ್ಷರನ್ನು ಪ್ರಶ್ನೆ ಮಾಡಿದ್ದು, ನೀವೇನಾದರೂ ಕ್ಷಮೆ ಕೇಳುವಿರಾ ಎಂಬ ಪ್ರಶ್ನೆಗೆ ಇಲ್ಲ ಎನ್ನುವ ಮೂಲಕ ತಳ್ಳಿ ಹಾಕಿದ್ದಾರೆ.
ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಕೇರ್ ಸ್ಮಾರ್ಮರ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿ ವೇಳೆ, ಕಳೆದ ವಾರ ಉಕ್ರೇನ್ ಅಧ್ಯಕ್ಷ ವಿರುದ್ಧ ನೀಡಿದ್ದ ಹೇಳಿಕೆಯಿಂದ ಹಿಂದೆ ಸರಿಯಲು ನಿರಾಕರಿಸಿದರು. ಆದರೆ ಉಕ್ರೇನ್ ಅಧ್ಯಕ್ಷರ ಬಗ್ಗೆ ಅಪಾರ ಗೌರವವಿದೆ. ಅವರು ರಷ್ಯಾ ವಿರುದ್ಧ ಧೈರ್ಯದಿಂದ ಹೋರಾಡಿದ್ದಾರೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ ಮುಂದೆ ಅವರೊಂದಿಗೆ ಉತ್ತಮ ಸಭೆ ನಡೆಯಲಿದೆ ಎಂಬ ವಿಶ್ವಾಸ ಇದೆ. ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ, ಈ ಬಾಂಧವ್ಯ ಹೀಗೆ ಮುಂದುವರೆಯಲಿದೆ. ಅಮೆರಿಕ ಅವರ ಬಗ್ಗೆ ಗೌರವ ಹೊಂದಿದೆ. ನಾನೂ ಸಹ ಝೆಲೆನ್ಸ್ಕಿ ಅವರ ಮೇಲೆ ಗೌರವ ಇಟ್ಟುಕೊಂಡಿದ್ದೇನೆ. ನಾವು ಅವರಿಗೆ ಅಪಾರ ಪ್ರಮಾಣದ ಉಪಕರಣಗಳನ್ನು ಹಾಗೂ ಹಣವನ್ನು ನೀಡಿದ್ದೇವೆ. ಅವರು ಸಹ ಧೈರ್ಯದಿಂದ ಹೋರಾಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಂದು ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಉಕ್ರೇನ್‌ನ ಖನಿಜ ನಿಕ್ಷೇಪಗಳ ಮೇಲೆ ಅಮೆರಿಕದ ಹಕ್ಕುಗಳನ್ನು ಸಾಧಿಸುವ ಪ್ರಸ್ತಾಪಕ್ಕೆ ಆರಂಭದಲ್ಲಿ ಕೀವ್ ನಿರಾಕರಿಸಿತ್ತು. ಹೀಗಾಗಿ ಟ್ರಂಪ್ ಉಕ್ರೇನ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮಂಡಿಸಿದ ನಿರ್ಣಯದ ವಿರೋಧವಾಗಿ ಅಮೆರಿಕ ಮತ ಚಲಾಯಿಸಿತ್ತು.
ಕೀವ್ ಅಪ್ಪಣೆ ಪಡೆಯದೇ ಉಕ್ರೇನ್ - ರಷ್ಯಾ ಯುದ್ಧ ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆಗೆ ಮುಂದಾಗಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಕ್ರೇನ್- ಅಮೆರಿಕ ನಡುವಣ ಬಾಂಧವ್ಯ ತುಸು ಒತ್ತಡದಲ್ಲಿತ್ತು. ಈ ಎಲ್ಲ ಬೆಳವಣಿಗೆಗಳ ಬಳಿಕ ಅಮೆರಿಕ ಅಧ್ಯಕ್ಷರನ್ನು ಉಕ್ರೇನ್ ಅಧ್ಯಕ್ಷರು ಭೇಟಿ ಮಾಡುತ್ತಿದ್ದಾರೆ.