ನವದೆಹಲಿ : 1984 ರ ಸಿಖ್ ವಿರೋಧಿ ದಂಗೆಯ ವೇಳೆ ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಂದೆ-ಮಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಮಾಜಿ ಸಂಸದ ಸಜ್ಜನ್ಕುಮಾರ್ಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತು.
ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಈ ತೀರ್ಪು ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 21 ರಂದು ನಡೆದಿದ್ದ ವಿಚಾರಣೆಯಲ್ಲಿ ಕಾಂಗ್ರೆಸ್ನ ಮಾಜಿ ನಾಯಕನನ್ನು ದೋಷಿ ಎಂದು ಘೋಷಿಸಿ, ತೀರ್ಪು ಕಾಯ್ದಿರಿಸಿದ್ದರು. ಇಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಪ್ರಕಟಿಸಿದರು. ದಂಗೆ ಸಂತ್ರಸ್ತರು ಮತ್ತು ತನಿಖೆ ನಡೆಸಿದ ಪೊಲೀಸರು ಸಜ್ಜನ್ಕುಮಾರ್ಗೆ ಮರಣದಂಡನೆ ನೀಡಬೇಕು. ಇದು ಅಪರೂಪದ ಪ್ರಕರಣ ಎಂದು ಕೋರ್ಟ್ ಮುಂದೆ ವಾದಿಸಿದ್ದರು. ಆದರೆ, ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಜ್ಜನ್ಕುಮಾರ್ ಅವರಿಗೆ ವಿಧಿಸಲಾಗುತ್ತಿರುವ ಎರಡನೇ ಜೀವಾವಧಿ ಶಿಕ್ಷೆ ಇದಾಗಿದೆ. 1984 ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ದೆಹಲಿಯ ಕಂಟೋನ್ಮೆಂಟ್ ನಡೆದ ದಂಗೆಯಲ್ಲಿ ಭಾಗಿಯಾದ ಪ್ರಕರಣದಲ್ಲಿ ಅವರಿಗೆ 2018 ರಲ್ಲಿ ದೆಹಲಿಯ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಸಜ್ಜನ್ಕುಮಾರ್ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ.
1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸಿಖ್ ಗನ್ಮ್ಯಾನ್ಗಳು ಕೊಂದ ಬಳಿಕ, ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಂದಿನ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ಸಜ್ಜನ್ಕುಮಾರ್ ಅವರು ಶಸ್ತ್ರಾಸ್ತ್ರ ಪಡೆಯನ್ನು ರೂಪಿಸಿದ್ದರು. ಜೊತೆಗೆ ಅದರ ನೇತೃತ್ವವನ್ನೂ ವಹಿಸಿದ್ದರು.
ಇಂದಿರಾ ಹತ್ಯೆಯಾದ ಮರುದಿನ ಅಂದರೆ, ನವೆಂಬರ್ 1ರಂದು ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಮ್ಮ ಶಸ್ತ್ರಸಜ್ಜಿತ ಗುಂಪನ್ನು ನುಗ್ಗಿಸಿ ದಂಗೆ ಎಬ್ಬಿಸಿದ್ದ ಆರೋಪ ಇವರ ಮೇಲಿದೆ. ಗಲಭೆಯಲ್ಲಿ ಸಿಖ್ ಸಮುದಾಯದ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣ್ದೀಪ್ ಸಿಂಗ್ ಅವರ ಕೊಲೆಯಾಗಿತ್ತು. ಬಳಿಕ ಸಜ್ಜನ್ಕುಮಾರ್ ನೇತೃತ್ವದ ಗುಂಪಿನ ವಿರುದ್ಧ ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.