ರಾಜಸ್ಥಾನ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ ಹೇಳಿಕೆಯು ರಾಜಸ್ಥಾನದ ವಿಧಾನಸಭೆಯಲ್ಲಿ ಜಟಾಪಟಿಗೆ ಕಾರಣವಾಗಿದ್ದು, ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಶುಕ್ರವಾರದ ಅಧಿವೇಶನದಲ್ಲಿ ಸಚಿವರ ಹೇಳಿಕೆ ಖಂಡಿಸಿ ಸದನದಲ್ಲಿ ಕೋಲಾಹಲ ನಿರ್ಮಾಣವಾಯಿತು. ಈ ವೇಳೆ ಆರು ಶಾಸಕರನ್ನು ಸದನದಿಂದ ಅಮಾನತು ಮಾಡಿತು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಅಹೋರಾತ್ರಿ ಧರಣಿ ಮಾಡಲು ನಿರ್ಧರಿಸಿತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್ ಗೆಹ್ಲೋಟ್, ಬಜೆಟ್ ಅಧಿವೇಶನದಲ್ಲಿ ಇಂದಿರಾ ಗಾಂಧಿಯನ್ನು ಅಜ್ಜಿ ಎಂದು ಸಂಬೋಧಿಸಿದ ಹಿನ್ನೆಲೆಯಲ್ಲಿ ಈ ಕೋಲಾಹಲ ಆರಂಭವಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಗೆಹ್ಲೋಟ್ 2023 - 24ರ ಬಜೆಟ್ನತ್ತ ಕೂಡ ಬೊಟ್ಟು ಮಾಡಿದ್ದು, ನಿಮ್ಮ ಅಜ್ಜಿ ಇಂದಿರಾ ಗಾಂಧಿ ಹೆಸರನ್ನೇ ಎಲ್ಲಾ ಯೋಜನೆಗಳಿಗೆ ಇಡುತ್ತೀರಾ ಎಂದು ಪ್ರಶ್ನಿಸಿದ್ದರು . ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿಯೇ ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು.
ಗದ್ದಲ ನಿಲ್ಲದೇ ಇರುವುದರಿಂದ ಹಾಗೂ ಸದನದ ಕಲಾಪ ಅಸ್ತವ್ಯಸ್ಥಗೊಳಿಸಿದ್ದಾರೆ ಎಂದು ಸ್ವೀಕರ್ ಕಾಂಗ್ರೆಸ್ ನ ಆರು ಜನ ಶಾಸಕರನ್ನು ಅಮಾನತಿನಲ್ಲಿಟ್ಟಿರುವುದಾಗಿ ಘೋಷಿಸಿದರು. ಹೀಗಾಗಿ ವಿಪಕ್ಷ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುವ ನಿರ್ಧಾರ ಕೈಗೊಂಡಿತು. ಸರ್ಕಾರದ ಮುಖ್ಯ ವಿಪ್ ಜೋಗೇಶ್ವರ್ ಗಾರ್ಗ್ ಕಾಂಗ್ರೆಸ್ ಶಾಸಕರಾದ ಗೋವಿಂದ್ ಸಿಂಗ್, ದೊತಸರ, ರಾಮ್ಕೇಶ್ ಮೀನಾ, ಅಮಿನ್ ಕಾಜ್ಜಿ, ಜಾಕಿರ್ ಹುಸೇನ್, ಹಕಂ ಅಲಿ ಮತ್ತು ಸಂಜಯ್ ಕುಮಾರ್ ಅವರನ್ನು ಧ್ವನಿ ಮತದ ಮೂಲಕ, ಅಶಿಸ್ತಿನ ಕಾರಣ ನೀಡಿ ಅಮಾನತು ಮಾಡಲಾಗಿದೆ.