ಟೆಲ್ ಅವಿವ್ : ಹಮಾಸ್ ಜೊತೆ ಕದನ ವಿರಾಮ ಒಪ್ಪಂದ ನಡೆಸಿರುವ ಇಸ್ರೇಲ್ನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ವರದಿಯಾಗಿದೆ. ರಸ್ತೆ ಬದಿ ನಿಂತಿದ್ದ ಮೂರು ಬಸ್ಗಳು ಸರಣಿ ಸ್ಫೋಟಕ್ಕೆ ಒಳಗಾಗಿದ್ದು, ಇದೊಂದು ಉಗ್ರಗಾಮಿ ಕೃತ್ಯ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್, ಯಾವುದೇ ಜೀವ ಹಾನಿಯಾಗಿಲ್ಲ.
ಒಂದೂವರೆ ವರ್ಷಗಳ ಕಾಲ ನಡೆದ ಯುದ್ದದ ಬಳಿಕ ಕದನ ವಿರಾಮಕ್ಕೆ ಹಮಾಸ್, ಇಸ್ರೇಲ್ ಒಪ್ಪಿದ್ದು, ಇದರ ಭಾಗವಾಗಿ ಹಸ್ತಾಂತರ ಪ್ರಕ್ರಿಯೆ ಕೂಡ ಮುಂದುವರೆದಿದೆ. ನಿನ್ನೆಯಷ್ಟೇ ಮಗು ಸೇರಿದಂತೆ ನಾಲ್ವರ ಮೃತ ಶರೀರವನ್ನು ಹಮಾಸ್ ಇಸ್ರೇಲ್ಗೆ ಹಸ್ತಾಂತರಿಸಿದ್ದು, ಈ ದುಃಖದಲ್ಲಿದ್ದ ಇಸ್ರೇಲಿನಲ್ಲಿ ಈ ದುರ್ಘಟನೆ ನಡೆದಿದೆ.
ಸ್ಫೋಟಗೊಂಡ ಎರಡು ಬಸ್ನಲ್ಲಿ ಸ್ಫೋಟಕಗಳು ಕಂಡು ಬಂದಿವೆ. ಆದರೆ, ಇವು ಸ್ಪೋಟಗೊಂಡಿಲ್ಲ. ಈ ವೇಳೆ ಐದು ಬಾಂಬ್ಗಳು ಪತ್ತೆಯಾಗಿದ್ದು, ಅವೆಲ್ಲ ಒಂದೇ ರೀತಿಯಲ್ಲಿದ್ದು, ಇದಕ್ಕೆ ಟೈಮರ್ ಅಳವಡಿಕೆ ಮಾಡಲಾಗಿದೆ. ಇವುಗಳನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರ ಅಸಿ ಅಹರೋನಿ ಚಾನೆಲ್ 13 ಟಿವಿಗೆ ತಿಳಿಸಿದ್ದಾರೆ.
ಟೆಲ್ ಅವೀವ್‌ನ ಹೊರವಲಯದ ಬ್ಯಾಟ್ ಯಾಮ್‌ನ ಪಾರ್ಕಿಂಗ್ ಸ್ಥಳದಲ್ಲಿ ಈ ಅನಾಹುತ ಸಂಭವಿಸಿದೆ. ಈ ವೇಳೆ ಸುಟ್ಟುಹೋದ ಮೆಟಲ್ ಶೆಲ್ಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಬಸ್ಗಳು ಸಂಚಾರ ಮುಗಿಸಿ ಇಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನಗರದ ಮೇಯರ್ ಟ್ಜ್ವಿಕಾ ಬ್ರೋಟ್ ತಿಳಿಸಿದ್ದಾರೆ.