image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಸ್ಸಾಂನ ಅಕ್ರಮ ರ‍್ಯಾಟ್​ ಹೋಲ್​ ಗಣಿಗಾರಿಕೆ ದುರಂತದಲ್ಲಿ ನಾಪತ್ತೆಯಾಗಿದ್ದ ಐದು ಕಾರ್ಮಿಕರ ಮೃತದೇಹಗಳು ಪತ್ತೆ

ಅಸ್ಸಾಂನ ಅಕ್ರಮ ರ‍್ಯಾಟ್​ ಹೋಲ್​ ಗಣಿಗಾರಿಕೆ ದುರಂತದಲ್ಲಿ ನಾಪತ್ತೆಯಾಗಿದ್ದ ಐದು ಕಾರ್ಮಿಕರ ಮೃತದೇಹಗಳು ಪತ್ತೆ

ಹಾಫ್ಲಾಂಗ್: ಅಸ್ಸಾಂನಲ್ಲಿ ಉಮ್ರಾಂಗ್ಸೊ ಟಿನಿ - ಕಿಲೋ ಕಲಮತಿ ಅಕ್ರಮ ರ‍್ಯಾಟ್​ ಹೋಲ್​ ಗಣಿಗಾರಿಕೆ ದುರಂತದಲ್ಲಿ ನಾಪತ್ತೆಯಾಗಿದ್ದ ಐದು ಕಾರ್ಮಿಕರ ಮೃತದೇಹಗಳು ಬುಧವಾರ ಪತ್ತೆಯಾಗಿವೆ. ಈ ಮೂಲಕ ನಾಪತ್ತೆಯಾಗಿದ್ದ ಎಲ್ಲ 9 ಕಾರ್ಮಿಕರ ಸಾವನ್ನಪ್ಪಿದಂತಾಗಿದೆ. ಜನವರಿ 6 ರಂದು ದಿಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಸೊದಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಮಳೆ ನೀರು ನುಗ್ಗಿದ್ದರಿಂದ ಅನೇಕ ಕಾರ್ಮಿಕರು ನಾಪತ್ತೆಯಾಗಿದ್ದರು.

ಆ ಸಮಯದಲ್ಲಿ ಕಾಣೆಯಾದ ಕಾರ್ಮಿಕರ ಒಟ್ಟು ಸಂಖ್ಯೆ ಒಂಬತ್ತು. ಜನವರಿ 6 ರಿಂದ ಅಕ್ರಮ ಕಲ್ಲಿದ್ದಲು ಗಣಿಯಿಂದ ನೀರನ್ನು ಸ್ಥಳಾಂತರಿಸುವ ನಿರಂತರ ಪ್ರಯತ್ನ ಮಾಡಲಾಗಿತ್ತು. ಭಾರತೀಯ ನೌಕಾಪಡೆ, NDRF ಮತ್ತು SDRF ಪಡೆಗಳು ಸತತ ಕಾರ್ಯಚರಣೆ ಕೈಗೊಂಡಿದ್ದವು. ಈ ವೇಳೆ ನಾಲ್ಕು ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಭಾರತೀಯ ನೌಕಾಪಡೆ ಜನವರಿ 15 ರಂದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ಇನ್ನುಳಿದ ಕಾರ್ಮಿಕರ ಸುಳಿವು ಸಿಕ್ಕಿರಲಿಲ್ಲ. ಆದಾಗ್ಯೂ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದವು, ಇಂದು ನಾಪತ್ತೆಯಾದ ಉಳಿದ ಐವರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಬುಧವಾರ ಮಧ್ಯಾಹ್ನ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಇಂದು, ಉಮ್ರಾಂಗ್ಸೊ ಗಣಿಗಳಲ್ಲಿನ ನೀರನ್ನು ತೆರವುಗೊಳಿಸುವ ಕಾರ್ಯಾಚರಣೆ ಒಂದು ಹಂತಕ್ಕೆ ಪೂರ್ಣಗೊಂಡಿದೆ. 5 ಮಂದಿ ಗಣಿಗಾರರ ಮೃತದೇಹವನ್ನು ಗಣಿ ಶಾಫ್ಟ್‌ನಿಂದ ಹೊರತೆಗೆಯಲಾಗಿದೆ. ಅವಶೇಷಗಳನ್ನು ಗುರುತಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೊದಲಿಗೆ ಎರಡು ಶವಗಳನ್ನು ಕಲ್ಲಿದ್ದಲು ಗಣಿಯಿಂದ ಹೊರತೆಗೆಯಲಾಯಿತು, ನಂತರ ಮಧ್ಯಾಹ್ನ ಎನ್‌ಡಿಆರ್‌ಎಫ್ ಪಡೆಗಳು ಮತ್ತೆ ಮೂರು ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿ ಆಗಿವೆ. ಜನವರಿ 6 ರಂದು ಸಂಭವಿಸಿದ ಭೀಕರ ದುರಂತದ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಆದರೆ, ಕಲ್ಲಿದ್ದಲು ಗಣಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದರಿಂದ ಇತರರನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಅಪಘಾತ ಸಂಭವಿಸಿದ ಉಮ್ರಾಂಗ್ಸೊ ಕಲ್ಲಿದ್ದಲು ಗಣಿಯಲ್ಲಿ 140 ಮಿಲಿಯನ್ ಲೀಟರ್ ನೀರು ಇತ್ತು ಮತ್ತು ಜನವರಿ 16 ರ ವೇಳೆಗೆ 40 ಮಿಲಿಯನ್ ಲೀಟರ್ ನೀರು ತೆಗೆಯಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ನೀರು ತೆರವಿಗೆ 25 ರಿಂದ 60 ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಕೊನೆಗೆ 45ನೇ ದಿನದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದು, ನಾಪತ್ತೆಯಾಗಿದ್ದ ಐವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ.

Category
ಕರಾವಳಿ ತರಂಗಿಣಿ