image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಝೆಲೆನ್​ಸ್ಕಿ ಪಾತ್ರವಿಲ್ಲದೆಯೇ ಉಕ್ರೇನ್ ಯುದ್ಧ ನಿಲ್ಲಿಸಬಲ್ಲೆ': ಟ್ರಂಪ್

ಝೆಲೆನ್​ಸ್ಕಿ ಪಾತ್ರವಿಲ್ಲದೆಯೇ ಉಕ್ರೇನ್ ಯುದ್ಧ ನಿಲ್ಲಿಸಬಲ್ಲೆ': ಟ್ರಂಪ್

ನ್ಯೂಯಾರ್ಕ್: ಉಕ್ರೇನ್ ಮತ್ತು ರಷ್ಯಾ ಮಧ್ಯೆ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಉಕ್ರೇನ್ ಅಧ್ಯಕ್ಷರ ಪಾತ್ರವಿಲ್ಲದೆಯೇ ಮುಗಿಸಲು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೊಲೊಡಿಮಿರ್ ಝೆಲೆನ್​ಸ್ಕಿಗೆ ಬೆದರಿಕೆ ಹಾಕಿದ್ದಾರೆ.

ಶೀಘ್ರ ನಿರ್ಧಾರ ಕೈಗೊಳ್ಳಿ ಇಲ್ಲದಿದ್ದರೆ...?: "ಝೆಲೆನ್ ಸ್ಕಿ ಕ್ಷಿಪ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಅವರು ಎಲ್ಲೂ ಸಲ್ಲದವರಾಗಬಹುದು" ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಟ್ರೂತ್ ಸೋಷಿಯಲ್​ನಲ್ಲಿ ಬರೆದಿದ್ದಾರೆ. "ಯುದ್ಧವನ್ನು ಕೊನೆಗೊಳಿಸಲು ನಾವು ರಷ್ಯಾದೊಂದಿಗಿನ ಯಶಸ್ವಿಯಾಗಿ ಮಾತುಕತೆ ನಡೆಸುತ್ತಿದ್ದೇವೆ. ಕೆಲವೊಂದಿಷ್ಟು ಕೆಲಸಗಳನ್ನು ಟ್ರಂಪ್ ಮಾತ್ರ ಮಾಡಬಲ್ಲರು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ" ಎಂದು ಅವರು ಹೇಳಿದರು.

ರಿಯಾದ್​ನಲ್ಲಿ ಅಮೆರಿಕ ಮತ್ತು ರಷ್ಯಾದ ರಾಜತಾಂತ್ರಿಕರ ನಡುವಿನ ಮಾತುಕತೆಯಲ್ಲಿ ಉಕ್ರೇನ್ ಭಾಗವಹಿಸಿರಲಿಲ್ಲ ಹಾಗೂ ತನ್ನ ಭಾಗವಹಿಸುವಿಕೆಯಿಲ್ಲದೆ ಜಾರಿಯಾಗಬಹುದಾದ ಶಾಂತಿ ಒಪ್ಪಂದವನ್ನು ತಮ್ಮ ದೇಶ ಸ್ವೀಕರಿಸುವುದಿಲ್ಲ ಎಂದು ಜೆಲೆನ್​ ಸ್ಕಿ ಹೇಳಿದ ನಂತರ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಝೆಲೆನ್ ಸ್ಕಿ, "ಟ್ರಂಪ್ ತಪ್ಪು ಮಾಹಿತಿಯ ಜಾಲದಲ್ಲಿ ವಾಸಿಸುತ್ತಿದ್ದಾರೆ" ಎಂದು ಕೀವ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. "ಝೆಲೆನ್ ಸ್ಕಿ ಚುನಾವಣೆಗಳಿಲ್ಲದ ಸರ್ವಾಧಿಕಾರಿ" ಎಂದು ಟ್ರಂಪ್ ಇದಕ್ಕೆ ತಿರುಗೇಟು ನೀಡಿದರು.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಆರಂಭಿಸಿದ್ದರೂ ಯುದ್ಧ ಆರಂಭವಾಗಲು ಉಕ್ರೇನ್ ದೇಶವೇ ಕಾರಣ ಎಂದು ಈ ಹಿಂದೆ ಟ್ರಂಪ್ ಆರೋಪಿಸಿದ್ದರು. ಅಮೆರಿಕವು ಉಕ್ರೇನ್​ನ ಯುದ್ಧ ವೆಚ್ಚಗಳನ್ನು ಭರಿಸುತ್ತಿರುವ ಪ್ರಮುಖ ಹಣಕಾಸುದಾರ ಮತ್ತು ಬೆಂಬಲಿಗನಾಗಿರುವುದರಿಂದ ಯುದ್ಧ ಕೊನೆಗೊಳಿಸುವ ಶಾಂತಿ ಸಂಧಾನದ ಷರತ್ತುಗಳನ್ನು ಝೆಲೆನ್​ ಸ್ಕಿ ಒಪ್ಪಿಕೊಳ್ಳುವಂತೆ ಏಕಪಕ್ಷೀಯವಾಗಿ ಒತ್ತಾಯಿಸಬಹುದು ಎಂಬುದು ಟ್ರಂಪ್ ಅವರ ಭಾವನೆಯಾಗಿದೆ.

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನೇತೃತ್ವದ ನಿಯೋಗಗಳು ಮಂಗಳವಾರ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಯುದ್ಧ ಕೊನೆಗೊಳಿಸುವ ಬಗ್ಗೆ ಚರ್ಚಿಸಿದ್ದಾರೆ. ಮಾತುಕತೆಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ ಎಂದು ಎರಡೂ ಕಡೆಯವರು ಹೇಳಿದ್ದಾರೆ. ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸಲು ರಷ್ಯಾ ಸಿದ್ಧವಾಗಿದೆ ಮತ್ತು ಲಾವ್ರೊವ್ ಮಾತುಕತೆಗಳು ಫಲಪ್ರದವಾಗಿವೆ ಎಂದು ರುಬಿಯೊ ಹೇಳಿದರು.

Category
ಕರಾವಳಿ ತರಂಗಿಣಿ