image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕದಿಂದ ಇಸ್ರೇಲ್​ಗೆ ಅತಿ ತೂಕದ ಎಂಕೆ-84 ಬಾಂಬ್​ಗಳ ಪೂರೈಕೆ

ಅಮೆರಿಕದಿಂದ ಇಸ್ರೇಲ್​ಗೆ ಅತಿ ತೂಕದ ಎಂಕೆ-84 ಬಾಂಬ್​ಗಳ ಪೂರೈಕೆ

ಜೆರುಸಲೇಂ : ಅಮೆರಿಕವು ಇತ್ತೀಚೆಗೆ ಎಂಕೆ-84 ಬಾಂಬ್​​ಗಳ ಪೂರೈಕೆಯ ಮೇಲಿನ ತಾತ್ಕಾಲಿಕ ನಿಷೇಧವನ್ನು ತೆಗೆದುಹಾಕಿದ ನಂತರ, ಅಮೆರಿಕವು ಇಸ್ರೇಲ್​ಗೆ ಭಾರಿ ತೂಕದ ಎಂಕೆ-84 ಬಾಂಬ್‌ಗಳನ್ನು ಕಳುಹಿಸಿಕೊಟ್ಟಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ತಿಳಿಸಿದೆ. ಎಂಕೆ-84 ಇದು 907 ಕೆಜಿ ತೂಕದ ಮಾರ್ಗದರ್ಶಿಯಲ್ಲದ ಬಾಂಬ್ ಆಗಿದ್ದು, ರಿ ಇನ್​ಫೋರ್ಸ್​ಡ್ ಗುರಿಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ತನ್ನ ಬಲವಾದ ಸ್ಫೋಟಕ ಶಕ್ತಿಯಿಂದ ವ್ಯಾಪಕ ಹಾನಿಯನ್ನುಂಟು ಮಾಡುತ್ತದೆ.

ಈ ಶಸ್ತ್ರಾಸ್ತ್ರಗಳನ್ನು ಹೊತ್ತ ಹಡಗು ಇಸ್ರೇಲಿನ ಅಶ್ದೋಡ್ ಬಂದರಿಗೆ ತಲುಪಿದೆ. ರಾತ್ರಿಯಿಡೀ ಈ ಹಡಗಿನಿಂದ ಶಸ್ತ್ರಾಸ್ತ್ರಗಳನ್ನು ಇಳಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊ ದೃಶ್ಯಾವಳಿಗಳಲ್ಲಿ ಹಡಗು ಕಂಟೇನರ್​ಗಳನ್ನು ಡಜನ್​ಗಟ್ಟಲೆ ಟ್ರಕ್​ಗಳಲ್ಲಿ ಲೋಡ್ ಮಾಡುತ್ತಿರುವುದು ಕಾಣಿಸಿದೆ. ಅವುಗಳನ್ನು ಇಸ್ರೇಲ್​ನ ವಾಯುಪಡೆಯ ನೆಲೆಗಳಿಗೆ ಸಾಗಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗಾಜಾ ಪಟ್ಟಿಯ ಜನನಿಬಿಡ ಪ್ರದೇಶಗಳಲ್ಲಿ ಈ ಬಾಂಬ್​ಗಳ ಸಂಭಾವ್ಯ ಬಳಕೆಯಿಂದಾಗಬಹುದಾದ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಆಡಳಿತಾವಧಿಯಲ್ಲಿ ಇಸ್ರೇಲ್​ಗೆ ಈ ಬಾಂಬ್​ಗಳ ಪೂರೈಕೆಯನ್ನು ನಿಲ್ಲಿಸಲಾಗಿತ್ತು.

ಈ ಬಾಂಬ್​ಗಳು ಇಸ್ರೇಲಿ ವಾಯುಪಡೆ ಮತ್ತು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) ಗಳ ಮಹತ್ವದ ಶಸ್ತ್ರಾಸ್ತ್ರಗಳಾಗಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಬಾಂಬ್​ಗಳನ್ನು ಪೂರೈಕೆ ಮಾಡಿದ್ದಕ್ಕಾಗಿ ಮತ್ತು ಇಸ್ರೇಲ್​ಗೆ ಅಚಲ ಬೆಂಬಲ ನೀಡಿದ್ದಕ್ಕಾಗಿ ಅವರು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತಕ್ಕೆ ಧನ್ಯವಾದ ಅರ್ಪಿಸಿದರು.

Category
ಕರಾವಳಿ ತರಂಗಿಣಿ