ಅಮೆರಿಕ: ಗುರುವಾರ ಶ್ವೇತ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಂಗಿಸಿಕೊಂಡು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದು ವಿಶೇಷವಾಗಿತ್ತು. ಯುಎಸ್ ಸ್ಟೇಟ್ ಸೆಕ್ರೆಟರಿ ಮಾರ್ಕೊ ರುಬಿಯೊ ಮತ್ತು ಯುಎಸ್ ಡಿಪಾರ್ಟ್ ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯೆನ್ಸಿ (ಡಿಒಜಿಇ) ಮುಖ್ಯಸ್ಥ ಎಲೋನ್ ಮಸ್ಕ್ ಸೇರಿದಂತೆ ಇತರ ಅಧಿಕಾರಿಗಳಿಗೆ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಯವರನ್ನು ಪರಿಚಯಿಸಿದರು.
ಶ್ವೇತಭವನದ ಉಪ ಮುಖ್ಯಸ್ಥ ಡಾನ್ ಸ್ಕಾವಿನೊ ಪಿಎಂ ಮೋದಿ ಮತ್ತು ಟ್ರಂಪ್ ಅವರು ಆಲಂಗಿಸಿಕೊಂಡಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ವೆಸ್ಟ್ ವಿಂಗ್ ಲಾಬಿಯಲ್ಲಿ ತೆರೆಮರೆಯಲ್ಲಿ ಅಧ್ಯಕ್ಷ ಟ್ರಂಪ್ ಭಾರತದ ಪ್ರಧಾನಿ ಅವರನ್ನು ಸ್ವಾಗತಿಸಿದರು" ಎಂದು ಸ್ಕಾವಿನೊ ಬರೆದಿದ್ದಾರೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಮತ್ತು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರನ್ನೊಳಗೊಂಡ ಭಾರತೀಯ ನಿಯೋಗವು ಪ್ರಧಾನಿ ಮೋದಿಯವರ ಆಗಮನದ ನಂತರ ಶ್ವೇತಭವನಕ್ಕೆ ಆಗಮಿಸಿತು. ಪ್ರಧಾನಿ ಮೋದಿಯವರ ಆಗಮನದ ಮೊದಲು, ಶ್ವೇತಭವನದಲ್ಲಿ ಭಾರತೀಯ ಧ್ವಜಗಳನ್ನು ಇರಿಸಲಾಗಿತ್ತು.
ಅಧ್ಯಕ್ಷ ಟ್ರಂಪ್ ಅವರ ಅಧಿಕಾರ ಸ್ವೀಕಾರದ ನಂತರ ಯುನೈಟೆಡ್ ಸ್ಟೇಟ್ಸ್ಗೆ ಭೇಟಿ ನೀಡಿದ ಮೊದಲ ಕೆಲವು ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು. ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ಮೂರು ವಾರಗಳಲ್ಲಿಯೇ ತನ್ನ ದೇಶಕ್ಕೆ ಭೇಟಿ ನೀಡುವಂತೆ ಅಮೆರಿಕ ಮೋದಿಯವರನ್ನು ಆಹ್ವಾನಿಸಿದ್ದು ವಿಶೇಷ.