ಅಮೆರಿಕ: ಅಮೆರಿಕದ ಸೆನೆಟರ್ (ಸಂಸದೆ) ತುಳಸಿ ಗಬ್ಬಾರ್ಡ್ ಅವರು 18 ಭದ್ರತಾ ಸಂಸ್ಥೆಗಳ ಮೇಲ್ವಿಚಾರಕ ಸಂಸ್ಥೆಯಾದ 'ರಾಷ್ಟ್ರೀಯ ಗುಪ್ತಚರ ವಿಭಾಗ'ದ ನಿರ್ದೇಶಕಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ವಿಶ್ವದ ಅತಿ ಬಲಿಷ್ಠ ದಳದ ನೇತೃತ್ವ ವಹಿಸಿದ ಮೊದಲ ಹಿಂದು ನಾಯಕಿ ಎಂಬ ಗರಿಮೆಗೂ ಪಾತ್ರರಾದರು.
ಗುಪ್ತಚರ ದಳದ ಮುಖ್ಯಸ್ಥೆಯಾಗಿ ತುಳಸಿ ಗಬ್ಬಾರ್ಡ್ ಅವರನ್ನು ಶ್ವೇತಭವನ ಅಂಗೀಕರಿಸಿತು. ಇದರ ಬೆನ್ನಲ್ಲೇ, ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಗೊಂಡಿ ಅವರು ಇಲ್ಲಿನ ಓವಲ್ ಕಚೇರಿಯಲ್ಲಿ ಗಬ್ಬಾರ್ಡ್‌ಗೆ ಪ್ರಮಾಣ ಬೋಧಿಸಿದರು.
ಗಬ್ಬಾರ್ಡ್ ಪ್ರಮಾಣ ಸ್ವೀಕಾರ ಕಾರ್ಯಕ್ರಮದ ವಿಡಿಯೋವನ್ನು ಶ್ವೇತಭವನ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. "ಓವಲ್ ಕಚೇರಿಯಲ್ಲಿ ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರಿಂದ ತುಳಸಿ ಗಬ್ಬಾರ್ಡ್ ಅಧಿಕೃತವಾಗಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕ ಮತ್ತೆ ಸುರಕ್ಷಿತವಾಗಿರಲಿದೆ" ಎಂದು ಹೇಳಿದೆ.
ತುಳಸಿ ಗಬ್ಬಾರ್ಡ್ ಅವರು ಭಾರತದ ಜೊತೆ ಯಾವುದೇ ನಂಟು ಹೊಂದಿಲ್ಲವಾದರೂ, ಹಿಂದು ಧರ್ಮವನ್ನು ಅನುಸರಿಸುತ್ತಾರೆ. ಇದನ್ನು ಅವರೇ ಸಂಸತ್ತಿನಲ್ಲಿ ಅಧಿಕೃತಗೊಳಿಸಿದ್ದರು. ಈ ಮೂಲಕ ಅಮೆರಿಕದ ಅತಿದೊಡ್ಡ ಭದ್ರತಾ ಸಂಸ್ಥೆಗೆ ಬಾಸ್ ಆಗಿ ನೇಮಕವಾದ ಮೊದಲ ಹಿಂದು ಎಂಬ ಅಭಿದಾನಕ್ಕೂ ಪಾತ್ರವಾದರು.ತುಳಸಿ ಗಬ್ಬಾರ್ಡ್ ಅವರ ತಾಯಿ ಕ್ಯಾರೊಲ್ ಪೋರ್ಟರ್ ಗಬ್ಬಾರ್ಡ್ ಅವರು ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದು, ಅವರು ತಮ್ಮ ಮಕ್ಕಳಿಗೆ ಭಕ್ತಿ, ಜೈ, ಆರ್ಯನ್, ತುಳಸಿ ಮತ್ತು ವೃಂದಾವನ ಎಂಬ ಹಿಂದೂ ಹೆಸರನ್ನಿಟ್ಟಿದ್ದಾರೆ.