ನವದೆಹಲಿ: ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಜನರ ಆಕ್ರೋಶಕ್ಕೆ ದೇಶದ ಸಂಸ್ಥಾಪಕರಾದ ಶೇಖ್ ಮುಜಿಬುರ್ ರೆಹಮಾನ್ ಅವರ ಮನೆ ಹೊತ್ತಿ ಉರಿದಿದೆ. ಇದಕ್ಕೆ ಕಾರಣ ದೇಶ ತೊರೆದು ಪಲಾಯನ ಮಾಡಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಮಾಡಿರುವ ಭಾಷಣವಾಗಿದೆ.
ಆನ್ಲೈನ್ ಮೂಲಕ ದೇಶವನ್ನು ಉದ್ದೇಶಿಸಿ ಶೇಖ್ ಹಸೀನಾ ಮಾತನಾಡುತ್ತಿದ್ದಂತೆ ಉದ್ರಿಕ್ತರಾದ ಪ್ರತಿಭಟನಾಕಾರರ ಗುಂಪು ಅವಾಮಿ ಲೀಗ್ ನಿಷೇಧಿಸುವಂತೆ ಒತ್ತಾಯಿಸಿ ಢಾಕಾದಲ್ಲಿ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಸ್ಮಾರಣಾರ್ಥವಾಗಿ ಇರುವ ನಿವಾಸದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ.
ಆಕ್ರೋಶಿತ ದಾಳಿಕೋರರ ಗುಂಪು ಧನ್ಮಂಡಿಯ 32ರಲ್ಲಿರುವ ರೆಹಮಾನ್ ಸ್ಮಾರಕ ನಿವಾಸದ ಗೇಟ್ ಮುರಿದು ಒಳ ಬಂದು ದಾಳಿಯನ್ನು ಆರಂಭಿಸಿದರು. ಕಟ್ಟಡದ ಮೇಲೆ ಹತ್ತಿ, ನಿವಾಸವನ್ನು ಧ್ವಂಸ ಮಾಡಿದ ಅವರು, ಮೇಲಿನ ಮಹಡಿಗೆ ಬೆಂಕಿ ಇಟ್ಟಿದ್ದಾರೆ.
ಅವಾಮಿ ಲೀಗ್‌ನಿಂದ ವಿಸರ್ಜಿಸಲ್ಪಟ್ಟ ವಿದ್ಯಾರ್ಥಿ ವಿಭಾಗ ಛತ್ರ ಲೀಗ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಸೀನಾ ಅವರು ಭಾಷಣ ಮಾಡಿದ್ದರು. ಈ ವೇಳೆ ದೇಶದಲ್ಲಿರುವ ಪ್ರಸ್ತುತ ಆಡಳಿತದ ವಿರುದ್ಧ ಪ್ರತಿರೋಧಿಸಲು ಅವರು ದೇಶವಾಸಿಗಳಿಗೆ ಕರೆ ನೀಡಿದ್ದರು.
ಭಾಷಣದಲ್ಲಿ 'ಮುಹಮ್ಮದ್ ಯೂನಸ್ ಅವರ ಆಡಳಿತವೂ ವಿದ್ಯಾರ್ಥಿಗಳ ತಾರತಮ್ಯ ವಿರೋಧಿ ಚಳವಳಿಯಿಂದ ಸ್ಥಾಪನೆ ಮಾಡಲಾಗಿದೆ. ಅವರು ದೇಶದ ಧ್ವಜ, ಸಂವಿಧಾನ, ಲಕ್ಷಾಂತರ ಹುತಾತ್ಮರ ಜೀವನವನ್ನು ಬುಲ್ಡೋಜರ್ನಿಂದ ನಾಶ ಮಾಡುವ ಶಕ್ತಿ ಹೊಂದಿಲ್ಲ. ಅವರು ಕಟ್ಟಡಗಳನ್ನು ಧ್ವಂಸ ಮಾಡಬಹುದು. ಇತಿಹಾಸವನ್ನಲ್ಲ. ಆದರೆ, ಇತಿಹಾಸ ಇದರ ಪ್ರತೀಕಾರ ಪಡೆಯಲಿದೆ ಎಂಬುದು ನೆನಪಿರಲಿ' ಎಂದು ಹೇಳಿದ್ದರು.