ನವದೆಹಲಿ: "ನಮ್ಮ ಸರ್ಕಾರ ದೇಶದ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದರು.
"ನಮ್ಮ ಸರ್ಕಾರ ಅನೇಕ ಯೋಜನೆಗಳಲ್ಲಿ ಪೋಲಾಗುತ್ತಿದ್ದ ಅಪಾರ ಪ್ರಮಾಣದ ಹಣ ಉಳಿಸಿದೆ. ಆ ಹಣವನ್ನು ನಾವು ಶೀಶ್ ಮಹಲ್ ಕಟ್ಟಲು ಬಳಸಿಲ್ಲ" ಎಂದು ಕೇಜ್ರಿವಾಲ್ ಅವರಿಗೆ ಪರೋಕ್ಷ ಟಾಂಗ್ ಕೊಟ್ಟರು. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಗಲೆ ಪುನರ್ನಿರ್ಮಾಣದ ವಿಚಾರವನ್ನು ಪರೋಕ್ಷವಾಗಿ ಮೋದಿ ಪ್ರಸ್ತಾಪಿಸಿದರು. "ನಾವು ಸುಳ್ಳು ಭರವಸೆಗಳನ್ನು ನೀಡಿಲ್ಲ. ವಾಸ್ತವವಾಗಿ ಜನರ ಅಭಿವೃದ್ಧಿ ಮಾಡಿದ್ದೇವೆ" ಎಂದು ತಿಳಿಸಿದರು.
"ಕೆಲವರು ವಿದೇಶಾಂಗ ನೀತಿ ಬಗ್ಗೆ ಪದೇ ಪದೇ ಮಾತನಾಡುತ್ತಿರುತ್ತಾರೆ. ಅವರು ಹೀಗೆ ಮಾತನಾಡುವುದರಿಂದ ದೇಶಕ್ಕಾಗುವ ತೊಂದರೆಗಳ ಕುರಿತು ಯೋಚಿಸುವುದಿಲ್ಲ. ಅವರ ಮಾತುಗಳು ಅರ್ಬನ್ ನಕ್ಸಲರಂತಿದೆ" ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾಸಮರ ನಡೆಸಿದರು.
"ತಮ್ಮ ಜೇಬಿನಲ್ಲಿ ಸಂವಿಧಾನ ಇಟ್ಟುಕೊಂಡು ಓಡಾಡುತ್ತಿರುವವರು ಮುಸ್ಲಿಂ ಮಹಿಳೆಯರು ಸಂಕಷ್ಟದ ಬದುಕು ಸಾಗಿಸುವಂತೆ ಮಾಡಿದ್ದರು. ತ್ರಿವಳಿ ತಲಾಖ್ ಪದ್ಧತಿಯನ್ನು ಕೊನೆಗೊಳಿಸುವ ಮೂಲಕ ನಾವು ಅವರ ಹಕ್ಕುಗಳನ್ನು ನೀಡಿದೆವು" ಎಂದು ಹೇಳಿದರು.
"ಜಾತಿಯ ಕುರಿತು ಮಾತನಾಡುವುದು ಕೆಲವರಿಗೆ ಫ್ಯಾಷನ್ ಆಗಿದೆ. ಕಳೆದ 30-35 ವರ್ಷಗಳಿಂದ ವಿವಿಧ ಪಕ್ಷಗಳ ಸಂಸತ್ ಸದಸ್ಯರು ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಒತ್ತಾಯಿಸುತ್ತಿದ್ದರು. ಒಬಿಸಿಗೆ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ಕೊಟ್ಟವವರು ನಾವು. ಇದನ್ನು ಇಂದು ಆ ಕುರಿತು ಮಾತನಾಡುತ್ತಿರುವವರು ತಿಳಿದುಕೊಳ್ಳಬೇಕು, ಕೆಲವರು ತುಷ್ಟೀಕರಣದ ಹಾದಿ ಹಿಡಿದರು. ಆದರೆ ನಾವು ಸಂತುಷ್ಟೀಕರಣದ ಹಾದಿ ಹಿಡಿದೆವು. ಶೇ.100ರಷ್ಟು ಸರ್ಕಾರದ ಯೋಜನೆಗಳು ಎಲ್ಲ ಸಮುದಾಯದ ಜನರನ್ನು ತಲುಪುವುದೇ ನಿಜವಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ಸಂವಿಧಾನಕ್ಕೆ ನೀಡುವ ಗೌರವ" ಎಂದು ಮೋದಿ ಪ್ರತಿಪಾದಿಸಿದರು.