ಇಸ್ಲಾಮಾಬಾದ್: ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ದೇಶದ ಕೇಂದ್ರೀಯ ಬ್ಯಾಂಕ್ ಬಡ್ಡಿದರದಲ್ಲಿ ಶೇ 10ರಷ್ಟು ಕಡಿತ ಮಾಡಿದ್ದರೂ ಪಾಕಿಸ್ತಾನವು ಆರ್ಥಿಕ ಬೆಳವಣಿಗೆಯನ್ನು ಪ್ರಾರಂಭಿಸಲು ವಿಫಲವಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ತೀರಾ ಇತ್ತೀಚಿನ ಬಡ್ಡಿದರ ಕಡಿತದ ಭಾಗವಾಗಿ ಜನವರಿ 27 ರಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು ಬಡ್ಡಿದರವನ್ನು ಶೇಕಡಾ 1 ರಷ್ಟು ಕಡಿತಗೊಳಿಸಿ ಅದನ್ನು ಶೇಕಡಾ 12 ಕ್ಕೆ ನಿಗದಿಪಡಿಸಿತ್ತು. ಅಲ್ಲಿಗೆ ಕಳೆದ ವರ್ಷದ ಜೂನ್ನಲ್ಲಿ ಇದ್ದ ಶೇಕಡಾ 22 ರಷ್ಟು ಬಡ್ಡಿದರಕ್ಕೆ ಹೋಲಿಸಿದರೆ 7 ತಿಂಗಳಲ್ಲಿ ಶೇಕಡಾ 10 ರಷ್ಟು ಬಡ್ಡಿದರ ಕಡಿಮೆಯಾಗಿದೆ. ಈ ಕ್ರಮಗಳಿಂದ ಹಣದ ಹರಿವು ಮತ್ತು ಬೆಳವಣಿಗೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ಬಡ್ಡಿದರದಲ್ಲಿ ತೀವ್ರ ಕುಸಿತದ ಹೊರತಾಗಿಯೂ, ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಪಾಕಿಸ್ತಾನದ ಆರ್ಥಿಕ ಬೆಳವಣಿಗೆಯು ನಕಾರಾತ್ಮಕವಾಗಿಯೇ ಉಳಿದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಆಗಾಗ ಬಡ್ಡಿದರಗಳನ್ನು ಕಡಿಮೆ ಮಾಡಿದ್ದರಿಂದ ಭಾರಿ ಪ್ರಮಾಣದ ಹಣ ಬ್ಯಾಂಕುಗಳಿಂದ ಖಾಸಗಿ ವಲಯ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್ಬಿಎಫ್ಐ) ವರ್ಗಾವಣೆಯಾಗಿದೆ ಎಂದು ವರದಿ ತಿಳಿಸಿದೆ. ಇಷ್ಟಾದರೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಅದು ವಿಫಲವಾಗಿದೆ ಎಂದು ಡಾನ್ ವರದಿ ಹೇಳಿದೆ.
ಹಣಕಾಸು ವರ್ಷ 2025 ರ ಎರಡನೇ ತ್ರೈಮಾಸಿಕದಲ್ಲಿ ಖಾಸಗಿ ವಲಯ ಮತ್ತು ಎನ್ಬಿಎಫ್ಐಗಳಿಗೆ ಬ್ಯಾಂಕ್ ಮುಂಗಡಗಳು ತೀವ್ರವಾಗಿ ಹೆಚ್ಚಾಗಿವೆ. ಖಾಸಗಿ ವಲಯಕ್ಕೆ ಹೆಚ್ಚಿನ ನಗದು ಪೂರೈಕೆಯು ಆರ್ಥಿಕತೆಯ ಮೇಲೆ ಪರಿಣಾಮ ಬೀರಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹಣಕಾಸು ತಜ್ಞರು ಹೇಳುತ್ತಿದ್ದರೆ, ಹಣದುಬ್ಬರವು ಮತ್ತೆ ಆರ್ಥಿಕತೆಯ ಬೆಳವಣಿಗೆಗೆ ಮಾರಕವಾಗಬಹುದು, ಆಮದುಗಳು ಹೆಚ್ಚಾಗಬಹುದು ಮತ್ತು ಇದರ ಪರಿಣಾಮವಾಗಿ 2025 ರ ಮೊದಲಾರ್ಧದಲ್ಲಿ ಪ್ರಸ್ತುತ 1.2 ಬಿಲಿಯನ್ ಯುಎಸ್ಡಿ ಹೆಚ್ಚುವರಿ ಚಾಲ್ತಿ ಕೊರತೆ ಎದುರಾಗಬಹುದು ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ.