ಜೆರುಸಲೇಂ: ಸಿರಿಯಾದಲ್ಲಿ ಅನಿರ್ದಿಷ್ಟಾವಧಿಯವರೆಗೆ ತಮ್ಮ ಸೇನಾ ಪಡೆಗಳು ಉಳಿಯಲಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
"ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) ಮೌಂಟ್ ಹರ್ಮನ್ ಶಿಖರದಲ್ಲಿ ಮತ್ತು ಬಫರ್ ವಲಯದಲ್ಲಿ ಅನಿರ್ದಿಷ್ಟಾವಧಿಯವರೆಗೆ ಉಳಿಯಲಿದೆ" ಎಂದು ಕಾಟ್ಜ್ ಮಂಗಳವಾರ ಮೌಂಟ್ ಹರ್ಮನ್ ಶಿಖರದಲ್ಲಿ ಇಸ್ರೇಲ್ ಸ್ಥಾಪಿಸಿದ ಮಿಲಿಟರಿ ಪೋಸ್ಟ್ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಇಸ್ರೇಲ್ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. "ಮೌಂಟ್ ಹರ್ಮನ್ ಪೋಸ್ಟ್ಗಳಲ್ಲಿ ದೀರ್ಘಾವಧಿಯವರೆಗೆ ರಕ್ಷಣೆ ಮತ್ತು ಆಕ್ರಮಣ ಮಾಡುವ ಎರಡೂ ವಿಷಯಗಳಲ್ಲಿ ಐಡಿಎಫ್ ಸೂಕ್ತವಾಗಿ ಸಿದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಅವರು ತಿಳಿಸಿದರು.
ಇರಾನ್ ಬೆಂಬಲಿತ ಪಡೆಗಳು ಮತ್ತು ಇಸ್ರೇಲ್ನೊಂದಿಗೆ ಮೈತ್ರಿ ಹೊಂದಿರದ ಇತರ ಗುಂಪುಗಳು ದಕ್ಷಿಣ ಸಿರಿಯಾದಲ್ಲಿ ಕಾಲಿಡುವುದನ್ನು ತಡೆಯಲು ಇಸ್ರೇಲ್ ನಿರ್ಧರಿಸಿದೆ ಎಂದು ಕಾಟ್ಜ್ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. "ದಕ್ಷಿಣ ಸಿರಿಯಾದ ಬಫರ್ ವಲಯದಲ್ಲಿ ಇಲ್ಲಿಂದ ಸುವೇಡಾ-ಡಮಾಸ್ಕಸ್ ಅಕ್ಷದವರೆಗೆ ಶತ್ರು ಪಡೆಗಳು ಕಾಲಿಡಲು ನಾವು ಅನುಮತಿಸುವುದಿಲ್ಲ ಮತ್ತು ನಮ್ಮ ರಕ್ಷಣೆಗಾಗಿ ನಾವು ಇತರರನ್ನು ಅವಲಂಬಿಸುವುದಿಲ್ಲ. ಆದರೆ ನಾವು ಈ ಪ್ರದೇಶದ ಸ್ನೇಹಪರ ಜನರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತೇವೆ ಹಾಗೂ ದೊಡ್ಡ ಡ್ರೂಜ್ ಸಮುದಾಯಕ್ಕೆ ಬೆಂಬಲ ನೀಡುತ್ತೇವೆ." ಎಂದು ಅವರು ನುಡಿದರು.