ನವದೆಹಲಿ : ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸಾಚಾರ ಕಾನೂನುಗಳನ್ನು ಮಹಿಳೆಯರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರ ತಡೆಗೆ ಕಾನೂನುಗಳ ಪರಿಶೀಲನೆ ಮತ್ತು ಸುಧಾರಣೆಗೆ ತಜ್ಞರ ಸಮಿತಿ ರಚಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾ ಮಾಡಿ, "ಸಮಾಜ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಿತು.
ಕಳೆದ ವರ್ಷ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಎಂಬವರ ಆತ್ಮಹತ್ಯೆ ಪ್ರಕರಣವು ದೇಶಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. ತನ್ನ ಆತ್ಮಹತ್ಯೆಗೆ ಪತ್ನಿಯ ಕಿರುಕುಳವೇ ಕಾರಣ ಎಂದು ವಿಡಿಯೋ ಮಾಡಿದ್ದ. ಇದರ ಬೆನ್ನಲ್ಲೇ, ಮಹಿಳೆಯರ ಪರವಾಗಿರುವ ವರದಕ್ಷಿಣೆ, ಕೌಟುಂಬಿಕ ಹಿಂಸಾಚಾರ ತಡೆ ಕಾನೂನುಗಳ ಸುಧಾರಣೆ ಮತ್ತು ಅವುಗಳ ದುರುಪಯೋಗ ತಡೆಯುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಅವರು ಡಿಸೆಂಬರ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇಂದು ನಡೆದ ಕೋರ್ಟ್ ಕಲಾಪದಲ್ಲಿ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿ ನಾಗರತ್ನ ಅವರು, "ಸಮಾಜವು ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ. ದುರುಪಯೋಗ ತಡೆಗೆ ಕಾನೂನುಗಳಿವೆ. ಹೀಗಾಗಿ, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 498A ಕಾನೂನುಗಳು ವಿವಾಹಿತ ಮಹಿಳೆಯರನ್ನು ವರದಕ್ಷಿಣೆ ಕಿರುಕುಳದಿಂದ ರಕ್ಷಿಸುವ ಉದ್ದೇಶ ಹೊಂದಿವೆ. ಆದರೆ, ಪತಿ- ಪತ್ನಿಯ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಈ ಕಾನೂನುಗಳನ್ನೇ ಬಳಸಿಕೊಂಡು ಮಹಿಳೆಯರು ಪತಿ ಮತ್ತು ಆತನ ಕುಟುಂಬವನ್ನು ನಿಯಂತ್ರಿಸಲು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ವಿವಾಹಿತ ಪುರುಷರ ಮೇಲೆ ಸುಳ್ಳು ಆರೋಪ ಮಾಡುವುದರಿಂದ ಮಹಿಳೆಯರಿಗೆ ಇರುವ ರಕ್ಷಣಾ ಕಾನೂನುಗಳ ಮೇಲೆಯೇ ಕರಿಛಾಯೆ ಮೂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.