ಡೆಹ್ರಾಡೂನ್: ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನಾಗರಿಕ ಸಂಹಿತೆ (Uniform Civil Code - ಯುಸಿಸಿ) ಜಾರಿಗೆ ಬಂದಿದ್ದು, ಸ್ವತಂತ್ರ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಿರುವ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು.
ಅವರು ಇಂದು ಯುಸಿಸಿ ಪೋರ್ಟಲ್ ಅನ್ನು ಉದ್ಘಾಟಿಸಿದ್ದು, ರಾಜ್ಯದಲ್ಲಿ ಅದರ ಔಪಚಾರಿಕ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಯುಸಿಸಿ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಏಕರೂಪತೆಯನ್ನು ತರುತ್ತದೆ ಎಂದು ಹೇಳಿದರು.
ಜ. 27 ರಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದ್ದು, ಸ್ವತಂತ್ರ ಭಾರತದಲ್ಲಿ ಇದೊಂದು ಹೊಸ ಅಧ್ಯಾಯ. ಸರ್ಕಾರವು ಸುಮಾರು ಎರಡೂವರೆ ವರ್ಷಗಳಿಂದ ಇದರ ಜಾರಿಗಾಗಿ ಕೆಲಸ ಮಾಡಿಕೊಂಡು ಬಂದಿದೆ. 27 ಮೇ 2022 ರಂದು ರಚಿಸಲಾಗಿದ್ದ ತಜ್ಞರ ಸಮಿತಿಯು ಫೆಬ್ರವರಿ 2, 2024 ರಂದು, ಸುಮಾರು 2 ವರ್ಷಗಳ ನಂತರ, ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತು. ಮಾರ್ಚ್ 8, 2024 ರಂದು ವಿಧಾನಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಯಿತು. ನಂತರ ರಾಷ್ಟ್ರಪತಿಗಳಿಗೆ ಅನುಮೋದನೆಗಾಗಿ ಕಳುಹಿಸಲಾಗಿತ್ತು. ರಾಷ್ಟ್ರಪತಿಗಳ ಅನುಮೋದನೆಯ ನಂತರ ಮಾರ್ಚ್ 12, 2024 ರಂದು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕಾಯ್ದೆಯನ್ನು ಸೂಚಿಸಲಾಯಿತು. ಈ ಎಲ್ಲ ಪ್ರಯತ್ನಗಳ ಫಲವಾಗಿ ಇಂದಿನಿಂದ ಕಾನೂನು ಜಾರಿಯಾಗಲಿದೆ ಎಂದು ಸಿಎಂ ಧಾಮಿ ಹೇಳಿದರು.