ರಾಜಸ್ಥಾನ : ಈ ವರ್ಷ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪರೀಕ್ಷೆಯಲ್ಲಿ (ನೀಟ್ ಯುಜಿ) ಬದಲಾವಣೆ ಮಾಡಲಾಗಿದೆ. ಕೋವಿಡ್ಗೂ ಮೊದಲಿದ್ದ ಮಾದರಿಯನ್ನು ಈ ಬಾರಿ ಅನುಸರಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಎಟಿ) ನಿರ್ಧರಿಸಿದೆ. ನಾಲ್ಕು ವರ್ಷಗಳ ನಂತರ ಪರೀಕ್ಷೆ ಸ್ವರೂಪ ಬದಲಾಗುತ್ತಿದೆ.
ಪರೀಕ್ಷೆಗೆ ನೀಡಲಾಗುತ್ತಿದ್ದ 200 ನಿಮಿಷದ (3 ಗಂಟೆ 20 ನಿಮಿಷಗಳು) ಬದಲಿಗೆ ಈಗ 180 ನಿಮಿಷದ ಅವಧಿ ನೀಡಲಾಗುತ್ತದೆ. 20 ನಿಮಿಷಗಳ ಹೆಚ್ಚುವರಿ ಕಾಲಾವಧಿ ಇನ್ನು ಮುಂದೆ ಇರುವುದಿಲ್ಲ. 720 ಅಂಕಗಳಿಗೆ 180 ಪ್ರಶ್ನೆಗಳಿರಲಿವೆ. ಎಲ್ಲ ಪ್ರಶ್ನೆಗಳಿಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಉತ್ತರಿಸಬೇಕಾಗುತ್ತದೆ ಎಂದು ಎನ್ಟಿಎ ತಿಳಿಸಿದೆ.
ಕೋವಿಡ್ಗೂ ಮೊದಲು ಈ ಪರೀಕ್ಷಾ ಮಾದರಿ ಇತ್ತು. ಕೋವಿಡ್ ಬಳಿಕ 720 ಅಂಕಗಳಿಗೆ 200 ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದರಲ್ಲಿ 20 ಪ್ರಶ್ನೆಗಳು ಆಯ್ಕೆಯಾಗಿದ್ದವು. ಈಗ, 20 ಹೆಚ್ಚುವರಿ ಪ್ರಶ್ನೆಗಳು ಇರುವುದಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ತಿಳಿಸಿದೆ.
ಪ್ರಶ್ನೆಪತ್ರಿಕೆಗಳನ್ನು ಎ ಮತ್ತು ಬಿ ಭಾಗ ಎಂದು ವಿಂಗಡಿಸಲಾಗುತ್ತಿತ್ತು. ಇದನ್ನೂ ಕೈಬಿಡಲಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಇರಲಿವೆ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಇನ್ನು ಮುಂದೆ ಪ್ರತ್ಯೇಕ ವಿಷಯಗಳಾಗಿರುವುದಿಲ್ಲ. ಅದನ್ನು ಜೀವಶಾಸ್ತ್ರದ ಅಡಿ ಕ್ರೋಢೀಕರಿಸಲಾಗಿದೆ.