ಆಂಧ್ರಪ್ರದೇಶ : ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ನೀಡಲಾಗುವ ಅನ್ನದಾಸೋಹದಲ್ಲಿ ಮಸಾಲೆ ವಡೆಯನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಮೊದಲ ದಿನವಾದ ಮಂಗಳವಾರ 5 ಸಾವಿರ ಭಕ್ತರಿಗೆ ವಡೆಯನ್ನು ಉಣ ಬಡಿಸಲಾಗಿದೆ.
ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಮಂಡಳಿಯು ದಕ್ಷಿಣ ಭಾರತದ ರುಚಿಕರ ಖಾದ್ಯವಾದ ಮಸಾಲೆ ವಡೆಯನ್ನು ಭಕ್ತರಿಗೆ ಅನ್ನಪ್ರಸಾದದಲ್ಲಿ ನೀಡುವ ಬಗ್ಗೆ ಯೋಚಿಸಿತ್ತು. ಅದರಂತೆ ಇಂದು ಅನ್ನಪ್ರಸಾದದ ಜೊತೆಗೆ ಸಂತರ್ಪಣೆ ಮಾಡಲಾಗಿದೆ.
ಮಸಾಲೆ ವಡೆ- ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಟಿಟಿಡಿ: ಭಕ್ತರ ದಾಸೋಹದಲ್ಲಿ ಮಸಾಲೆ ವಡೆಯನ್ನು ಮುಂದುವರಿಸಬೇಕೆ ಬೇಡವೇ ಎಂಬುದನ್ನು ತಿಳಿಯಲು ಇನ್ನಷ್ಟು ದಿನ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ. ಮೊದಲ ದಿನ ವಡೆ ಸವಿದ ಭಕ್ತರು ಅದರ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಮಸಾಲೆ ವಡೆಯ ನೀಡಿದ್ದನ್ನು ಸ್ವಾಗತಿಸಿ, ಇದು ಊಟದ ರುಚಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.