ಅಗರ್ತಲಾ: ತ್ರಿಪುರಾ ಸರಕಾರದ ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್ ಗಳು ರವಿವಾರ ಉನಕೋಟಿ ಜಿಲ್ಲೆಯ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಬಾಂಗ್ಲಾದೇಶ ಸರಕಾರವು ತನ್ನ ಭೂಮಿಯಲ್ಲಿ ನಿರ್ಮಿಸುತ್ತಿರುವ ವಿವಾದಾತ್ಮಕ ಡ್ಯಾಮ್ನ ಬಗ್ಗೆ ಅಧ್ಯಯನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶವು ನಿರ್ಮಾಣ ಮಾಡುತ್ತಿರುವ ಈ ಒಡ್ಡಿನಿಂದ ಮಾನ್ಸೂನ್ ಸೀಸನ್ನಲ್ಲಿ ಜಿಲ್ಲಾ ಕೇಂದ್ರ ಕೈಲಾಶಹರ್ ಮತ್ತು ಗಡಿ ಗ್ರಾಮಗಳಲ್ಲಿ ಪ್ರವಾಹದ ಅಪಾಯ ಎದುರಾಗಬಹುದು ಎಂದು ತ್ರಿಪುರಾ ಎಂಜಿನಿಯರ್ಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇಲಾಖೆಯ ಎಂಜಿನಿಯರ್ಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ದಿಲೀಪ್ ಕುಮಾರ್ ಚಕ್ಮಾ ಅವರಿಗೆ ಡ್ಯಾಮ್ ನಿರ್ಮಾಣದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲಿದ್ದು, ನಂತರ ಅವರು ರಾಜ್ಯ ಸರ್ಕಾರಕ್ಕೆ ವರದಿ ರವಾನಿಸಲಿದ್ದಾರೆ ಎಂದು ತ್ರಿಪುರಾ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಕ್ಮಾ ಅವರು ಇತರ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಶುಕ್ರವಾರ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸೂಕ್ತ ಕ್ರಮಗಳಿಗಾಗಿ ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬಹುದು ಎಂದು ಅವರು ಹೇಳಿದರು.
ನೆರೆಯ ದೇಶದ ಮೌಲ್ವಿಬಜಾರ್ ಜಿಲ್ಲೆಯ ಶರಿಪುರ್ ಮತ್ತು ದೇವಿಪುರ ಪ್ರದೇಶಗಳಲ್ಲಿ ಬಾಂಗ್ಲಾದೇಶ ಸರ್ಕಾರ ನಿರ್ಮಿಸುತ್ತಿರುವ ವಿವಾದಾತ್ಮಕ ಡ್ಯಾಮ್ನ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಮೌಲ್ವಿಬಜಾರ್ ಜಿಲ್ಲೆಯು ಉತ್ತರ ತ್ರಿಪುರಾದ ಉನಕೋಟಿ ಜಿಲ್ಲೆಯ ಪಕ್ಕದಲ್ಲಿರುವುದು ಗಮನಾರ್ಹ.