ಅಮೆರಿಕ: ಮೊದಲ ದಿನವೇ ಕಮಾಲ್ ಮಾಡಲು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಸನ್ನದ್ಧರಾಗಿದ್ದಾರೆ. ಜನವರಿ 20ರಂದು ಅಂದರೆ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕರಿಸಿದ ಮರುಗಳಿಗೆಯಲ್ಲಿ 100 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲು ಅವರು ಯೋಜಿಸಿದ್ದಾರೆ.
ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಖಾಸಗಿ ಸಭೆಯಲ್ಲಿ ರಿಪಬ್ಲಿಕನ್ ಸೆನೆಟರ್‌ಗಳಿಗೆ ಟ್ರಂಪ್ ಈ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ಆದರೆ, ಈಗ ಅವರ ಕಾರ್ಯಕಾರಿಣಿ ಒಂದು ನಿಮಿಷವೂ ವ್ಯರ್ಥ ಮಾಡದೇ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅವರ ನಿಕಟವರ್ತಿಗಳ ಪ್ರಕಾರ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗಳಂತೆ ಡೊನಾಲ್ಡ್ ಟ್ರಂಪ್, ಅಧಿಕಾರ ಆರಂಭದ ದಿನವೇ ಕಾರ್ಯಕಾರಿ ಆದೇಶಗಳನ್ನು ಹೊರಡಿಸಲಾಗುತ್ತದೆ ಹಾಗೂ ಪ್ರಮುಖವಾಗಿ ಏಳು ಅಂಶಗಳ ಮೇಲೆ ಅವರು ಕಾರ್ಯಕಾರಿ ಆದೇಶ ಹೊರಡಿಸುತ್ತಾರೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ದೇಶದ ದಕ್ಷಿಣ ಗಡಿ ಮುಚ್ಚುವುದು ಅವರ ಮೊದಲ ಆದ್ಯತೆ ಆಗಿದೆ. ವಲಸಿಗರ ಗಡಿಪಾರು, ತೃತೀಯ ಲಿಂಗಿಗಳ ಹಕ್ಕುಗಳಿಗೆ ಕಡಿವಾಣ, ತೈಲ ತೆಗೆಯುವಿಕೆ ಹೆಚ್ಚಳ, ಸರ್ಕಾರದ ದಕ್ಷತೆ ಸುಧಾರಣೆ, ಕ್ಷಮಾದಾನದಂತಹ ಪ್ರಮುಖ ನಿರ್ಣಯಗಳನ್ನು ಮೊದಲ ದಿನವೇ ತೆಗೆದುಕೊಳ್ಳಲು ಟ್ರಂಪ್ ನಿರ್ಧರಿಸಿದ್ದಾರೆ.