ಒಟ್ಟಾವ: ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಜಸ್ಟಿನ್ ಟ್ರುಡೊ ಸೋಮವಾರ ಪ್ರಕಟಿಸಿದರು. ಆಡಳಿತಾರೂಢ ಲಿಬರಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲು ಕೇಳಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ನಾಯಕತ್ವದ ಮೇಲೆ ಹೆಚ್ಚುತ್ತಿರುವ ಅಸಮಾಧಾನ ಹಾಗೂ ಕಳೆದ ವರ್ಷಾಂತ್ಯದಲ್ಲಿ ಹಣಕಾಸು ಸಚಿವೆಯ ಹಠಾತ್ ರಾಜೀನಾಮೆಯಂಥ ಬೆಳವಣಿಗೆಗಳು ಸರ್ಕಾರದೊಳಗಿನ ಬಿಕ್ಕಟ್ಟನ್ನು ತೋರಿಸಿದ್ದವು.
ಟ್ರುಡೊ 2015ರಲ್ಲಿ ಆಯ್ಕೆಯಾದಾಗ ಕೆನಡಾದ ಇತಿಹಾಸದಲ್ಲಿ ಎರಡನೇ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಕ್ಷದಲ್ಲಿ ಅಸಮಾಧಾನ ಹೆಚ್ಚುತ್ತಿದ್ದರೂ ಟ್ರುಡೊ ಮುಂದಿನ ವರ್ಷದ ಚುನಾವಣೆಯಲ್ಲಿ ನಾಲ್ಕನೇ ಅವಧಿಗೆ ಸ್ಪರ್ಧಿಸಲು ಯೋಜಿಸಿದ್ದರು. ಟ್ರುಡೋ ಅವರ ಲಿಬರಲ್ ಪಕ್ಷಕ್ಕೆ ಪ್ರತಿಪಕ್ಷ ನ್ಯೂ ಡೆಮಾಕ್ರಟಿಕ್ ಪಾರ್ಟಿ(ಎನ್ಡಿಪಿ) ಹಲವು ವರ್ಷಗಳಿಂದ ಬೆಂಬಲ ನೀಡಿತ್ತು.
ಎನ್ಡಿಪಿ ನಾಯಕ ಜಗ್ಮೀತ್ ಸಿಂಗ್ ಅವರು, ಟ್ರುಡೊ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿ, "ಮುಂದಿನ ಲಿಬರಲ್ ಪಕ್ಷದ ನಾಯಕ ಯಾರು ಎಂಬುದು ಮುಖ್ಯವಲ್ಲ. ಟ್ರುಡೊ ನಿಮ್ಮನ್ನು ನಿರಾಸೆಗೊಳಿಸಿದ್ದಾರೆ. ಅವರು ಮತ್ತೊಂದು ಅವಕಾಶ ಪಡೆಯಲು ಅರ್ಹರಲ್ಲ. ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ನಾವು ಸರ್ಕಾರದ ವಿರುದ್ಧ ಮತ ಚಲಾಯಿಸುತ್ತೇವೆ" ಎಂದು ಹೇಳಿದರು.