ಇಸ್ರೇಲ್: ಲಿಟಾನಿ ನದಿಯ ಉತ್ತರ ದಿಕ್ಕಿನಲ್ಲಿ ನಿಯೋಜಿಸಲಾಗಿರುವ ಪಡೆಗಳನ್ನು ಹಿಂತೆಗೆದುಕೊಳ್ಳದಿದ್ದರೆ ಇಸ್ರೇಲ್ ಕದನ ವಿರಾಮ ಒಪ್ಪಂದವನ್ನು ಮುರಿಯಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹಿಜ್ಬುಲ್ಲಾಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಕದನ ವಿರಾಮದ ನಿಯಮಗಳ ಪ್ರಕಾರ, ಲಿಟಾನಿ ನದಿಯ ಉತ್ತರ ದಿಕ್ಕಿನಲ್ಲಿ ನಿಯೋಜಿಸಲಾಗಿರುವ ಹೋರಾಟಗಾರರು ಮತ್ತು ಶಸ್ತ್ರಾಸ್ತ್ರಗಳನ್ನು ಜನವರಿ 26ರೊಳಗೆ ಹಿಜ್ಬುಲ್ಲಾ ಹಿಂತೆಗೆದುಕೊಳ್ಳಬೇಕಿದೆ. ಅದೇ ದಿನಾಂಕದೊಳಗೆ, ವಿಶ್ವಸಂಸ್ಥೆ ಗುರುತಿಸಿರುವ ಲೆಬನಾನ್ ಮತ್ತು ಇಸ್ರೇಲ್ ನಡುವಿನ ಗಡಿಯಾಗಿರುವ ಬ್ಲೂ ಲೈನ್ನ ದಕ್ಷಿಣ ದಿಕ್ಕಿನಿಂದ ಇಸ್ರೇಲ್ ಕೂಡ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕಿದೆ. ನಂತರ ಈ ಪ್ರದೇಶದಲ್ಲಿ ಲೆಬನಾನ್ ಸೇನೆ ತನ್ನ ಪಡೆಗಳನ್ನು ನಿಯೋಜಿಸಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ನ ಉತ್ತರ ಕಮಾಂಡ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾನುವಾರ ಮಾತನಾಡಿದ ಕಾಟ್ಜ್, ಇಸ್ರೇಲ್ ಲೆಬನಾನ್ ಒಪ್ಪಂದವನ್ನು ಎತ್ತಿಹಿಡಿಯಲು ಬಯಸುತ್ತದೆ ಎಂದು ಹೇಳಿದರು. ಆದರೆ ಈಗಲೂ ಹಿಜ್ಬುಲ್ಲಾ ತನ್ನ ಪಡೆಗಳನ್ನು ವಾಪಸು ಕರೆಸಿಕೊಂಡಿಲ್ಲ, ಹಿಜ್ಬುಲ್ಲಾ ಷರತ್ತು ಪಾಲಿಸದಿದ್ದರೆ ಶಾಂತಿ ಒಪ್ಪಂದ ಜಾರಿಯಲ್ಲಿರುವುದಿಲ್ಲ ಎಂದು ಅವರು ತಿಳಿಸಿದರು.