ಇಂದೋರ್ : ನೀತಿ ಆಯೋಗದ ವರದಿಯ ಪ್ರಕಾರ, ಮಧ್ಯಪ್ರದೇಶವು ಬಡತನದಲ್ಲಿ ಶೇಕಡಾ 15.94 ರಷ್ಟು ಭಾರೀ ಇಳಿಕೆಯೊಂದಿಗೆ ಬಡ ರಾಜ್ಯ ಎಂಬ ಪಟ್ಟಿಯಿಂದ ಹೊರಬರಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ದೇಶದ ಅತ್ಯಂತ ಸ್ವಚ್ಛ ನಗರ ಇಂದೋರ್‌ನಲ್ಲಿ ಭಿಕ್ಷುಕರ ಸಂಖ್ಯೆ ಕೂಡ ಇಳಿಮುಖವಾಗಿದ್ದು, ಜನವರಿ 1 ರಿಂದ ದೇಶದ ಮೊದಲ ಭಿಕ್ಷುಕ ಮುಕ್ತ ನಗರವಾಗಿದೆ ಹೊರ ಹೊಮ್ಮಿದೆ.
ಜನವರಿ 1 ರಿಂದ ದೇಶದ ಸ್ವಚ್ಛ ನಗರವಾಗಿರುವ ಇಂದೋರ್ ಇನ್ನು ಮುಂದೆಯೂ ಸಂಪೂರ್ಣವಾಗಿ ಭಿಕ್ಷುಕರ ಮುಕ್ತ ನಗರವಾಗಿ ಇರಲು ಸಿದ್ಧತೆ ನಡೆಸಿದೆ. ಭಿಕ್ಷುಕನ ಬಗ್ಗೆ ಮಾಹಿತಿ ನೀಡುವವರಿಗೆ ಒಂದು ಸಾವಿರ ರೂಪಾಯಿ ಬಹುಮಾನ ನೀಡಲಾಗುವ ದೇಶದ ಮೊದಲ ನಗರ ಇದಾಗಿದೆ. ಭಿಕ್ಷೆ ತೆಗೆದುಕೊಳ್ಳುವುದು ಮತ್ತು ಭಿಕ್ಷೆ ನೀಡುವುದು ಎರಡೂ ಅಪರಾಧದ ವರ್ಗಕ್ಕೆ ಬರಲಿದೆ. ಸಿವಿಲ್ ಕೋಡ್ 2023 ಮತ್ತು ಸಿವಿಲ್ ಪ್ರೊಟೆಕ್ಷನ್ ಆಕ್ಟ್‌ನ ಸೆಕ್ಷನ್ 163 (1-2) ಅಡಿ ನಿರ್ಬಂಧಿತ ಆದೇಶಗಳನ್ನು ನೀಡಲಾಗಿದೆ. ಇದರ ಅಡಿ ಈಗ ಇಂದೋರ್‌ನಲ್ಲಿ ಭಿಕ್ಷೆ ಬೇಡುವುದು ಅಪರಾಧದ ವ್ಯಾಪ್ತಿಗೆ ಬರುತ್ತದೆ. ಹಾಗೇ ಭಿಕ್ಷೆ ಬೇಡುವವರ ವಿರುದ್ಧ ಸೆಕ್ಷನ್ 144ರ ಅಡಿ ಕ್ರಮ ಕೈಗೊಳ್ಳಲಾಗುವುದು.
ಈ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಮಾಹಿತಿ ನೀಡಿ, "ಇಂದೋರ್ ಸಂಪೂರ್ಣ ಭಿಕ್ಷುಕ ಮುಕ್ತಗೊಳಿಸಲು ನಾವು ಶ್ರಮಿಸಿದ್ದೇವೆ. ಮೊದಲು ಸಮೀಕ್ಷೆ ನಡೆಸಿ, ನಂತರ ಅವರಿಗೆ ಉದ್ಯೋಗ ಸಂಪರ್ಕ ಕಲ್ಪಿಸುವ ಕೆಲಸ ನಡೆದಿದೆ. ಹೊರಗಿನಿಂದ ಜನರನ್ನು ಕರೆತಂದು ಭಿಕ್ಷೆ ಬೇಡಿಸಲಾಗುತ್ತಿತ್ತು ಎಂಬ ಕೆಲ ಅಂಶಗಳೂ ಇವೆ. ಈ ಬಗ್ಗೆ ಮಾಹಿತಿಯೂ ಬೆಳಕಿಗೆ ಬಂದಿದೆ. ಕೆಲ ಕುಟುಂಬದಲ್ಲಿ ಸದಸ್ಯರನ್ನು ಭಿಕ್ಷೆ ಬೇಡುವಂತೆ ಒತ್ತಾಯಿಸಲಾಗುತ್ತಿದೆ. ಇಲ್ಲಿಯವರೆಗೆ, ನಾವು ಇಂದೋರ್ ಅನ್ನು ಬಹುತೇಕ ಭಿಕ್ಷುಕ ಮುಕ್ತಗೊಳಿಸಿದ್ದೇವೆ. ಅವರಿಗೂ ಉತ್ತಮ ರೀತಿಯಲ್ಲಿ ಪುನರ್ವಸತಿ ಕಲ್ಪಿಸುತ್ತಿದ್ದೇವೆ. ನಾವು ಅವರಿಗೆ ಉದ್ಯೋಗ ನೀಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.