ಇಸ್ಲಾಮಾಬಾದ್: ಅಫ್ಘಾನಿಸ್ತಾನದಿಂದ ಪಲಾಯನ ಮಾಡಿ ಪಾಕಿಸ್ತಾನಕ್ಕೆ ಬಂದಿರುವ ಆಫ್ಘನ್ ನಿರಾಶ್ರಿತರ ಬದುಕು ದಿನದಿಂದ ದಿನಕ್ಕೆ ದುರ್ಬರ ವಾಗುತ್ತಿದೆ. ಆಫ್ಘನ್ ನಿರಾಶ್ರಿತ ಮಹಿಳೆ ಶಹರ್ ಜಾದ್ ಎಂಬುವರು ಇಸ್ಲಾಮಾಬಾದ್ನಲ್ಲಿ ಚಿಕ್ಕ ಕೋಣೆಯೊಂದರಲ್ಲಿ ವಾಸಿಸುತ್ತಿದ್ದು, ಇದು ಅವರಿಗೆ ತಾಲಿಬಾನ್ ಆಡಳಿತವನ್ನೇ ನೆನಪಿಸುತ್ತಿದೆ.
ಮುಖ್ಯವಾಗಿ ಇಲ್ಲಿ ವಾಸಿಸುವ ದಾಖಲೆರಹಿತ ಕುಟುಂಬಗಳ ಮೇಲೆ ಪಾಕಿಸ್ತಾನದ ಪೋಲಿಸ್ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಿರಾಶ್ರಿತರಿಗೆ ಕಿರುಕುಳ ನೀಡುವ, ಸುಲಿಗೆ ಮಾಡುವ ಮತ್ತು ಅವರನ್ನು ಬಂಧಿಸಲಾಗುತ್ತಿರುವ ವರದಿಗಳು ಬಂದಿವೆ. ಸದ್ಯ ದೇಶದಲ್ಲಿ ಉಂಟಾಗಿರುವ ಆಫ್ಘನ್ ವಿರೋಧಿ ಅಲೆಯಲ್ಲಿ ತಮ್ಮ ಜೀವನ ಕೊಚ್ಚಿ ಹೋಗಲಿದೆ ಎಂದು ನಿರಾಶ್ರಿತರು ಆತಂಕದಲ್ಲಿದ್ದಾರೆ.
"ಆಫ್ಘನ್ನರಿಗೆ, ಇಲ್ಲಿನ ಪರಿಸ್ಥಿತಿ ಭಯಾನಕವಾಗಿದೆ ಮತ್ತು ಪಾಕಿಸ್ತಾನ ಪೊಲೀಸರ ನಡವಳಿಕೆಯು ತಾಲಿಬಾನ್ನಂತೆಯೇ ಇದೆ" ಎಂದು ಶಹರ್ ಜಾದ್ ಹೇಳಿದರು.
ತನ್ನ ಮಗ ಇತ್ತೀಚೆಗೆ ಉದ್ಯಾನವನದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಹೇಳಿದರು. ಅವರು ಯಾವುದೇ ದಾಖಲೆಗಳನ್ನು ತೋರಿಸಿ ಎಂದು ಕೇಳದೆ ನಮಗೆ ಹಣ ಕೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಳೆದ ಬೇಸಿಗೆಯಲ್ಲಿ ಪಾಕಿಸ್ತಾನ ಸರ್ಕಾರವು ಸುಮಾರು 7 ಲಕ್ಷ 50 ಸಾವಿರ ಅಫ್ಘಾನಿಗಳನ್ನು ಹೊರ ಹಾಕಿದ ನಂತರ ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಉಗ್ರಗಾಮಿ ಸಂಘಟನೆಯು ಉಗ್ರಗಾಮಿ ದಾಳಿಗಳನ್ನು ತೀವ್ರಗೊಳಿಸಿದೆ ಎಂದು ಸರ್ಕಾರ ಉಲ್ಲೇಖಿಸಿದೆ.