ಸಿಯೋಲ್: ಮುಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಇಳಿಯುತ್ತಿದ್ದ 'ಜೆಜು ಏರ್' ವಿಮಾನ ಅಪಘಾತಕ್ಕೀಡಾಗಿದ್ದು, ದುರ್ಘಟನೆಯಲ್ಲಿ ಕನಿಷ್ಠ 85 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ರತೀಕೂಲ ಹವಾಮಾನ ಹಾಗೂ ವಿಮಾನಕ್ಕೆ ಹಕ್ಕಿ ಬಡಿದಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದ್ದು, ಜಂಟಿ ತನಿಖೆಯ ಬಳಿಕ ನಿಖರ ಕಾರಣ ಏನೆಂಬುದನ್ನು ಘೋಷಿಸಲಾಗುವುದು ಎಂದು ಮುಯಾನ್ ಅಗ್ನಿಶಾಮಕ ದಳದ ಮುಖ್ಯಸ್ಥ ಲೀ ಜಿಯಾಂಗ್-ಹೂನ್ ತಿಳಿಸಿದ್ದಾರೆ. ಲ್ಯಾಂಡ್ ಆಗುವ ವೇಳೆ ರನ್‌ವೇನಿಂದ ಜಾರಿದ ವಿಮಾನ, ವೇಗವಾಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಕ್ಷಣವೇ ಹೊತ್ತಿ ಉರಿದಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಬಂದ ಈ ವಿಮಾನದಲ್ಲಿ, 6 ಮಂದಿ ಸಿಬ್ಬಂದಿ, 175 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ. ಉಳಿದ ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.