ರಾಜಸ್ಥಾನ: ಪ್ರತಿ ವರ್ಷದಂತೆ ಈ ವರ್ಷವೂ ಅಜ್ಮೀರ್ನ ಖ್ಯಾತ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾದಲ್ಲಿ ವಾರ್ಷಿಕ ಉರ್ಸ್ (ಉರುಸು-ಜಾತ್ರೆ) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಯಾತ್ರಿಕರ ತಂಡವೊಂದು ಇಲ್ಲಿಗೆ ಭೇಟಿ ನೀಡಿ ವಿಶೇಷ ಪಾರ್ಥನೆ ಸಲ್ಲಿಸಲಿದೆ.
1974ರ ಭಾರತ-ಪಾಕಿಸ್ತಾನ ಶಿಷ್ಟಾಚಾರದ ಚೌಕಟ್ಟಿನಡಿ ಅಜ್ಮೀರ್ ದರ್ಗಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶವಿದ್ದು, ಅದರಂತೆ ಇಲ್ಲಿಗೆ ಭೇಟಿ ನೀಡಿ ವಿಶೇಷ ಪಾರ್ಥನೆ ಸಲ್ಲಿಸಲಿದೆ ಎಂದು ಅಜ್ಮೀರ್ ಆಡಳಿತ ಮಂಡಳಿ ತಿಳಿಸಿದೆ.
ಉರುಸ್ ನಲ್ಲಿ ಪಾಲ್ಗೊಳ್ಳಲು ಸಲುವಾಗಿ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತರು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯ. ಈ ಪೈಕಿ ನೆರೆಯ ರಾಷ್ಟ್ರ ಪಾಕಿಸ್ತಾನದ ಯಾತ್ರಾರ್ಥಿಗಳ ತಂಡ ಕೂಡ ಜನವರಿ 4 ರಂದು ಭಾರತವನ್ನು ಪ್ರವೇಶ ಮಾಡಲಿದೆ. 264 ಪಾಕಿಸ್ತಾನಿ ಯಾತ್ರಾರ್ಥಿಗಳ ಗುಂಪು ಜನವರಿ 4 ರಂದು ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಕಾಲಿಡಲಿದೆ. ಮರುದಿನ ಜನವರಿ 5 ರಂದು ದೆಹಲಿಗೆ ಬರಲಿದ್ದು, ಅಲ್ಲಿಂದ ವಿಶೇಷ ರೈಲಿನ ಮೂಲಕ ಜನವರಿ 6 ರಂದು ಅಜ್ಮೀರ್ ತಲುಪಲಿದೆ. ಜನವರಿ 12 ರಂದು ಅಜ್ಮೀರ್‌ನಿಂದ ವಾಪಸ್ ತೆರಳಲಿದೆ. ಕೇಂದ್ರೀಯ ಬಾಲಕಿಯರ ಶಾಲೆಯಲ್ಲಿ ಪಾಪ್ ಯಾತ್ರಿಕರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಿದೆ. ಇದು ತಾತ್ಕಾಲಿಕ ವೇಳಾ ಪಟ್ಟಿಯಾಗಿದ್ದು, ಅಧಿಕೃತ ಭೇಟಿ ಬಗ್ಗೆ ಇನ್ನೂ ಪ್ರಕಟವಾಗಬೇಕಿದೆ ಎಂದು ಅಜ್ಮೀರ್ ಆಡಳಿತ ಮಂಡಳಿ ಮಾಹಿತಿ ನೀಡಿದೆ.