ಡಮಾಸ್ಕಸ್: ಸಿರಿಯಾದ ಗಡಿ ನಗರ ಕೊಬಾನಿ ಬಳಿ ಟರ್ಕಿ ಪಡೆಗಳು ಮತ್ತು ಅದರ ಮಿತ್ರ ಪಡೆಗಳು ದಾಳಿಗಳನ್ನು ಹೆಚ್ಚಿಸಿವೆ ಎಂದು ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್ (ಎಸ್ಡಿಎಫ್) ಆರೋಪಿಸಿದೆ. ಟರ್ಕಿಯ ಪಡೆಗಳು ಮತ್ತು ಅದರ ಬಾಡಿಗೆ ಸೈನಿಕರು ಬುಧವಾರ ಕೊಬಾನಿಯ ದಕ್ಷಿಣ ಹೊರವಲಯದಲ್ಲಿ, ವಿಶೇಷವಾಗಿ ತಿಶ್ರೀನ್ ಅಣೆಕಟ್ಟು ಪ್ರದೇಶದ ಬಳಿ ಪೂರ್ಣ ಪ್ರಮಾಣದ ದಾಳಿ ಆರಂಭಿಸಿದ್ದಾರೆ ಎಂದು ಎಸ್ಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.
ತನ್ನ ಹೋರಾಟಗಾರರು ರಾತ್ರಿಯ ವೇಳೆಗೆ ದಾಳಿಕೋರರನ್ನು ಹಿಮ್ಮೆಟ್ಟಿಸಿದರು. ಆದರೆ, ಟರ್ಕಿಯ ಡ್ರೋನ್ಗಳು ಮತ್ತು ಫಿರಂಗಿಗಳು ಕೊಬಾನಿಯ ವಿವಿಧ ಭಾಗಗಳ ಮೇಲೆ ದಾಳಿ ಮುಂದುವರಿಸಿವೆ ಎಂದು ಗುಂಪು ಹೇಳಿಕೊಂಡಿದೆ. ಇದಲ್ಲದೇ ಟ್ಯಾಂಕ್ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ಟರ್ಕಿಯ ಮಿಲಿಟರಿ ಪಡೆಗಳು ಸಿರಿಯಾದ ಉತ್ತರ ಗಡಿ ಉದ್ದಕ್ಕೂ ಜಮಾಯಿಸುತ್ತಿವೆ ಎಂದು ಹೇಳಲಾಗಿದೆ.
ಸಿರಿಯಾದಲ್ಲಿ ಯುದ್ಧ ಪರಿಸ್ಥಿತಿಗಳನ್ನು ನಿಲ್ಲಿಸುವ ಪ್ರಯತ್ನಗಳ ಭಾಗವಾಗಿ ಡಿಸೆಂಬರ್ 14 ರಂದು ನಡೆದ ಅಕಾಬಾ ಸಭೆಯಲ್ಲಿ ಯುಎಸ್ ನೇತೃತ್ವದ ಪ್ರಯತ್ನಗಳಿಗೆ ಮತ್ತು ಸಕಾರಾತ್ಮಕ ನಿಲುವಿಗೆ ಎಸ್ಡಿಎಫ್ ತನ್ನ ಬೆಂಬಲ ವ್ಯಕ್ತಪಡಿಸಿದೆ.
ಟರ್ಕಿ ತನ್ನ ಮೇಲೆ ನಡೆಸುತ್ತಿರುವ ದಾಳಿಯ ವಿರುದ್ಧ ಸ್ಪಷ್ಟ ಮತ್ತು ದೃಢವಾದ ನಿಲುವು ತೆಗೆದುಕೊಳ್ಳುವಂತೆ ಎಸ್ಡಿಎಫ್ ಜಾಗತಿಕ ಸಮುದಾಯಕ್ಕೆ ಕರೆ ನೀಡಿದೆ. ಸಿರಿಯಾದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಟರ್ಕಿ ಯತ್ನಿಸುತ್ತಿದೆ ಎಂದು ಅದು ಆರೋಪಿಸಿದೆ.