ಪಾಕಿಸ್ತಾನ : ಏಳು ವರ್ಷಗಳ ಅಮಾನತು ಆದೇಶದ ಬಳಿಕ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (PIA) ಅಮೆರಿಕಕ್ಕೆ ತನ್ನ ವಿಮಾನಯಾನವನ್ನು ಪುನಾರಂಭಿಸಲಿದೆ. ಇದು ದೇಶದ ವಾಯುಯಾನ ವಲಯಕ್ಕೆ ಮಹತ್ವದ ಬೆಳವಣಿಗೆಯಾಗಿದೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಡುವೆ ಬಾಕಿ ಉಳಿದಿರುವ ಹಣಕಾಸಿನ ಬಾಧ್ಯತೆಗಳನ್ನು ಇತ್ಯರ್ಥಗೊಳಿಸಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಡಿಜಿ ಸಿಎಎ ನಾದಿರ್ ಶಾಫಿ ದಾರ್ ಅವರ ಪ್ರಕಾರ, ಎಫ್‌ಎಎಗೆ ಪಾವತಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಫೆಬ್ರವರಿ ಅಥವಾ ಮಾರ್ಚ್‌ನೊಳಗೆ ಎಫ್‌ಎಎ ನಿಯೋಗವು ಪಾಕಿಸ್ತಾನಕ್ಕೆ ಭೇಟಿ ನೀಡಲು ದಾರಿ ಮಾಡಿಕೊಡಲಿದೆ. ಈ ಬೆಳವಣಿಗೆಯು ಎಫ್‌ಎಎಯೊಂದಿಗೆ ಪಾಕಿಸ್ತಾನವನ್ನು 'ವರ್ಗ ಒಂದರ‘ ಸ್ಥಾನಮಾನಕ್ಕೆ ಮರುವರ್ಗೀಕರಿಸುವ ಸಾಧ್ಯತೆಗಳನ್ನು ಹೆಚ್ಚಿಸಿದೆ. ಹಾಗೇ ಅಮೆರಿಕಕ್ಕೆ ನೇರ ವಿಮಾನಗಳನ್ನು ಪುನಾರಂಭಿಸಲು ಅನುವು ಮಾಡಿಕೊಡುತ್ತದೆ.
ನ್ಯೂಯಾರ್ಕ್‌ಗೆ ನಾಲ್ಕು ಮತ್ತು ಚಿಕಾಗೋಗೆ ಎರಡು ಸೇರಿದಂತೆ ಪಾಕಿಸ್ತಾನ ಮತ್ತು ಅಮೆರಿಕ ನಡುವೆ ವಾರಕ್ಕೆ ಆರು ವಿಮಾನಗಳ ಹಾರಾಟವನ್ನು ಪಾಕ್ನ ಈ ವಿಮಾನಯಾನ ಸಂಸ್ಥೆ ನಿರ್ವಹಿಸುತ್ತಿತ್ತು.ಆದರೆ 2017 ರಲ್ಲಿ ಅಮೆರಿಕಕ್ಕೆ PIAಯ ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. ಪಾಕ್ ಸರ್ಕಾರದಿಂದ ಸರ್ಕಾರಕ್ಕೆ (G2G) ಒಪ್ಪಂದಗಳ ಮೂಲಕ PIA ಅನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ. ಮತ್ತು ಡಿಸೆಂಬರ್ 31 ರವರೆಗೆ ಗಡುವನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.