ಇಸ್ರೇಲ್ : ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಪತನದ ಹಿನ್ನೆಲೆಯಲ್ಲಿ ಇಸ್ರೇಲ್-ಸಿರಿಯಾ ಗಡಿಯ ಗೋಲನ್ ಹೈಟ್ಸ್‌ನ ಬಫರ್ ವಲಯದ ಕೆಲ ಹೊಸ ಪ್ರದೇಶಗಳಲ್ಲಿ ಇಸ್ರೇಲ್ ತನ್ನ ಪಡೆಗಳನ್ನು ನಿಯೋಜಿಸಿದೆ. ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಈ ಕ್ರಮವನ್ನು ದೃಢಪಡಿಸಿದ್ದು, 1974ರ ಸೇನಾ ಹಿಂತೆಗೆತ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇದು ಇಂಥ ಮೊದಲ ನಿಯೋಜನೆಯಾಗಿದೆ.
"ಬಫರ್ ವಲಯಕ್ಕೆ ಸಶಸ್ತ್ರ ಹೋರಾಟಗಾರರ ಪ್ರವೇಶ ಸಾಧ್ಯತೆ ಸೇರಿದಂತೆ ಸಿರಿಯಾದಲ್ಲಿ ಇತ್ತೀಚಿನ ಘಟನೆಗಳ ನಂತರ ಎದುರಾಗಿರುವ ಸನ್ನಿವೇಶದ ಮೌಲ್ಯಮಾಪನಕ್ಕೆ ಅನುಗುಣವಾಗಿ ಗೋಲನ್ ಹೈಟ್ಸ್‌ನಲ್ಲಿನ ನಿವಾಸಿಗಳು ಮತ್ತು ಇಸ್ರೇಲ್ ನಾಗರಿಕರ ಸುರಕ್ಷತೆಯನ್ನು ಕಾಪಾಡಲು ಐಡಿಎಫ್ ಬಫರ್ ವಲಯದಲ್ಲಿ ಮತ್ತು ತನ್ನ ರಕ್ಷಣೆಗೆ ಅಗತ್ಯವಾದ ಹಲವಾರು ಸ್ಥಳಗಳಲ್ಲಿ ಪಡೆಗಳನ್ನು ನಿಯೋಜಿಸಿದೆ" ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಐಡಿಎಫ್ ಪೋಸ್ಟ್ ಮಾಡಿದೆ.
"ಸಿರಿಯಾದಲ್ಲಿ ನಡೆಯುತ್ತಿರುವ ಘಟನೆಗಳಲ್ಲಿ ಐಡಿಎಫ್ ಮಧ್ಯಪ್ರವೇಶಿಸುವುದಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ" ಎಂದು ಐಡಿಎಫ್ ಹೇಳಿಕೊಂಡಿದೆ.
ಸಿರಿಯಾದ ಬಂಡುಕೋರ ಪಡೆಗಳು ವಾರಾಂತ್ಯದಲ್ಲಿ ದೇಶದಾದ್ಯಂತ ಮಿಂಚಿನ ವೇಗದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಇಸ್ರೇಲ್ ಗಡಿಯ ಸಮೀಪವಿರುವ ಕ್ಯುನೆಟ್ರಾ ಮತ್ತು ದಾರಾ ಪ್ರದೇಶಗಳನ್ನು ವಶಪಡಿಸಿಕೊಂಡಿರುವುದಾಗಿ ಶನಿವಾರ ತಿಳಿಸಿವೆ. ಈ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಲು ಯತ್ನಿಸಿದರೆ ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಐಡಿಎಫ್ ಎಚ್ಚರಿಕೆ ನೀಡಿದೆ.