ಕೇರಳ: ಮಲ್ಲಪುರ ತಿರೂರ್‌ನಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಕೋತಿಯೊಂದು ಛಾವಣಿಯ ಮೇಲೆ ಕೆಲಸ ಮಾಡುತ್ತಿದ್ದ ಯುವಕನ ಮೊಬೈಲ್ ಎತ್ತಿಕೊಂಡ ಘಟನೆ ನಡೆದಿದೆ.
ತಿರೂರಿನ ಸಂಗಮಮ್ ರೆಸಿಡೆನ್ಸಿಯ ಮೇಲಿನ ಮಹಡಿಯಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದ ಯುವಕನ ಮೊಬೈಲ್ ಫೋನ್ ನ್ನು ಈ ಕೋತಿ ಎತ್ತಿಕೊಂಡಿತ್ತು. ಕೆಲಸ ಮಾಡುವಾಗ, ಫೋನ್ ಅನ್ನು ನೆಲದ ಮೇಲೆ ಇರಿಸಲಾಗಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕೋತಿ ಫೋನ್ ಹಿಡಿದುಕೊಂಡು ವೇಗವಾಗಿ ತೆಂಗಿನ ಮರ ಏರಿದೆ.
ಯುವಕ, ತನ್ನ ಸಹೋದ್ಯೋಗಿಗಳೊಂದಿಗೆ ಸೇರಿ ಫೋನ್ ಹಿಂಪಡೆಯಲು ಪ್ರಯತ್ನಿಸಿದರೂ ಕೋತಿ ಅಲ್ಲಿ ನಿಲ್ಲದೆ, ಎತ್ತರದ ಕೊಂಬೆಗಳಿಗೆ ಏರುವುದನ್ನು ಮುಂದುವರೆಸಿದೆ, ಅವರ ಪ್ರಯತ್ನದ ನಡುವೆಯೇ ಫೋನ್ ರಿಂಗಣಿಸಿದ್ದು, ಕೋತಿ ಬಟನ್ ಒತ್ತಿ ಫೋನ್ ಅನ್ನು ಕಿವಿಗೆ ಹಿಡಿದಿದೆ. ಅನಿರೀಕ್ಷತವಾದ ಘಟನೆಯಿಂದ ನೋಡುತ್ತಿದ್ದವರೆಲ್ಲರೂ ದಿಗ್ಧಮೆಗೊಂಡಿದ್ದಾರೆ. ಅಂತಿಮವಾಗಿ ಕೋತಿ ಮತ್ತೊಂದು ಮರಕ್ಕೆ ನೆಗೆಯಲು ತಯಾರಿ ನಡೆಸುತ್ತಿದ್ದಂತೆಯೇ ಫೋನ್ ನೆಲಕ್ಕೆ ಬಿದ್ದಿದೆ. ಇದರಿಂದ ಯುವಕಮತ್ತು ಗೆಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.