ಜರ್ಮನಿ: ಜರ್ಮನಿಯ ಲೋವರ್ ಸ್ಯಾಕ್ಸನಿ ರಾಜ್ಯದ ಬ್ರೌನ್ಸ್ವಿಕ್ ಮತ್ತು ವೋಲ್ಫ್ಸ್‌ಬರ್ಗ್ ಪ್ರದೇಶಗಳ ಸದಸ್ಯರನ್ನು ಒಳಗೊಂಡಿರುವ ಬ್ರಾವೋ ಕನ್ನಡ ಬಳಗ ನ. 23ರಂದು ತನ್ನ 4ನೇ ಕರ್ನಾಟಕ ರಾಜ್ಯೋತ್ಸವ ಬ್ರೌನ್ಸ್ವಿಕ್‌ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಳೆದ ಕೆಲವು ವರ್ಷಗಳಿಂದ, ರಾಜ್ಯೋತ್ಸವವನ್ನು ಜರ್ಮನಿ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಹ ಭರ್ಜರಿಯಾಗೇ ಆಚರಿಸುತ್ತಿದ್ದಾರೆ. ಈ ಜಾಗತಿಕ ಹಬ್ಬವು, ಭೌಗೋಳಿಕ ಅಂತರವನ್ನು ಮೀರಿ ತಮ್ಮ ಸಂಸ್ಕೃತಿ ಮತ್ತು ಭಾಷೆಯ ಮೇಲಿನ ಪ್ರೀತಿಯ ಆಳವನ್ನು ತೋರ್ಪಡಿಸುತ್ತಿದೆ. ಇದಕ್ಕೆ ಜರ್ಮನಿ ಕನ್ನಡಿಗರು ಸಹ ಹೊರತಾಗಿಲ್ಲ.
ಬ್ರೌನ್ಸ್ವಿಕ್ - ವೋಲ್ಫ್ಸ್‌ಬರ್ಗ್ ಪ್ರದೇಶದ ಬಾಲವಿಕಾಸದ ಮಕ್ಕಳು ಶುಭ ಶ್ಲೋಕ ಪಠಿಸುವ ಮೂಲಕ ರಾಜ್ಯೋತ್ಸವ ಸಮಾರಂಭಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆ ಬಳಿಕ ಸಾಂಪ್ರದಾಯಿಕ ದೀಪ ಬೆಳಗಿಸಿ ನಾಡಗೀತೆಯನ್ನು ಹಾಡಲಾಯಿತು.
ವೇದಿಕೆ ಸಮಾರಂಭದ ಬಳಿಕ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ, ಭರತನಾಟ್ಯ, ಜಾನಪದ ನೃತ್ಯ, ಗೀತ ಗಾಯನ, ರಸಪ್ರಶ್ನೆ, ಮಕ್ಕಳ ವೇಷಭೂಷಣ ಪ್ರಮುಖ ಆಕರ್ಷಣೆಗಳಾಗಿದ್ದವು. 30ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಿ ಎಲ್ಲರನ್ನೂ ರಂಜಿಸಿದರು.